ನವದೆಹಲಿ, ಏ.29 (DaijiworldNews/MB) : ಕೊರೊನಾ ಹಿನ್ನೆಲೆ ವಿಶ್ವಸಂಸ್ಥೆಯು ನೀಡುತ್ತಿರುವ ಸಹಾಯವನ್ನು ಭಾರತ ನಿರಾಕರಿಸಿದ್ದು ದೇಶಕ್ಕೆ ಅಗತ್ಯವಿರುವ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಣೆ ಮಾಡಲು ''ದೇಶದಲ್ಲಿ ಉತ್ತಮ ವ್ಯವಸ್ಥೆ ಇದೆ'' ಎಂದು ಹೇಳಿರುವುದಾಗಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗಟೆರ್ರೆಸ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನಾವು ಅಗತ್ಯ ನೆರವು ನೀಡುವುದಾಗಿ ಹೇಳಿದೆವು. ಆದರೆ ಭಾರತ ನಿರಾಕರಿಸಿದೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಸಂಸ್ಥೆ ಮುಖ್ಯಸ್ಥರ ಉಪ ವಕ್ತಾರ ಫರ್ಹಾನ್ ಹಖ್, "ನಾವು ಕೊರೊನಾ ಸಂದರ್ಭ ಅಗತ್ಯ ನೆರವು ನೀಡುವುದಾಗಿ ಹೇಳಿದೆವು, ಆದರೆ ಅದನ್ನು ಭಾರತ ನಿರಾಕರಿಸಿ ನಮ್ಮಲ್ಲಿ ಉತ್ತಮವಾದ ವ್ಯವಸ್ಥೆ ಇದೆ ಎಂದು ಹೇಳಿದೆ. ಆದರೆ ನಮ್ಮ ಪ್ರಸ್ತಾಪವು ಹಾಗೆಯೇ ಇರುತ್ತದೆ. ನಾವು ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧರಿದ್ದೇವೆ. ಭಾರತದಲ್ಲಿ ನಮ್ಮ ಸಹವರ್ತಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ'' ಎಂದು ಭಾರತದ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಏತನ್ಮಧ್ಯೆ ಬೆಡ್, ಆಕ್ಸಿಜನ್ ಮೊದಲಾದ ಕೊರತೆಗಳು ಕಾಣಿಸಿದೆ.
ಇನ್ನು ಯುಎನ್ ಜನರಲ್ ಅಸೆಂಬ್ಲಿ ಅಧ್ಯಕ್ಷರು, ''ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ದುರ್ಬಲ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಿದ ದೇಶಕ್ಕೆ ವಿಶ್ವವು ಸಹಾಯ ಮತ್ತು ಬೆಂಬಲವನ್ನು ನೀಡುವ ಸಮಯ ಬಂದಿದೆ'' ಎಂದು ಹೇಳಿದ್ದರು.