ಬೆಂಗಳೂರು, ಎ.29 (DaijiworldNews/PY): ಕೊರೊನಾ ಕರ್ಫ್ಯೂ ಯಾವ ರೀತಿ ನಡೆಯುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಎಲ್ಲಾ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಜ್ಞರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ, ಸೋಂಕು ನಿಯಂತ್ರಣ ಕ್ರಮಗಳು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸೇರಿದಂತೆ ಹಾಸಿಗೆಗಳು, ಐಸಿಯು, ಆಕ್ಸಿಜನ್ ಹಾಗೂ ಅಗತ್ಯವಾದ ಔಷಧಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಲಸಿಕೆ ವಿತರಣೆಯ ಬಗ್ಗೆ ಕೂಡಾ ಚರ್ಚಿಸಲಾಗಿದ್ದು, ಸಿಎಂ ಅಗತ್ಯವಾದ ಸೂಚನೆಗಳನ್ನು ನೀಡಿದ್ದಾರೆ.
"ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಜನರು ಕೊರೊನಾ ಕರ್ಫ್ಯೂ ನಿಯಮವನ್ನು ಪಾಲಿಸುತ್ತಿದ್ದಾರೆಯೇ, ವಾಹನಗಳ ಹಾಗೂ ಜನರ ಸಂಚಾರ ಯಾವ ರೀತಿ ಇದೆ. ಜನರು ಕರ್ಫ್ಯೂ ನಿಯಮವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರಾ?" ಎಂದು ಸಿಎಂ ಕೇಳಿದ್ದಾರೆ.
"ಈ ಬಾರಿ ಜನರು ಕರ್ಫ್ಯೂ ನಿಯಮವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಸ್ತೆಗಳಲ್ಲಿ ಆರಾಮವಾಗಿ ಓಡಾಡುತ್ತಿದ್ದಾರೆ ಎನ್ನುವ ಮಾಹಿತಿ ಸುದ್ದಿ ವಾಹಿನಿಗಳಲ್ಲಿ ಬರುತ್ತಿವೆ. ಜಿಲ್ಲೆಗಳಲ್ಲಿ ಅಧಿಕಾರಿಗಳು, ಪೊಲೀಸರು ಸೂಕ್ತವಾದ ರೀತಿಯಲ್ಲಿ ತಪಾಸಣೆ ನಡೆಸುತ್ತಿಲ್ಲವೇ?" ಎಂದು ಸಭೆಯಲ್ಲಿ ಸಿಎಂ ಗರಂ ಆದರು.
"ರಾಜ್ಯದಲ್ಲಿ ಮೇ 12ರವರೆಗೆ ಜನರು ಕೊರೊನಾ ಕರ್ಫ್ಯೂ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ, ಕರ್ಫ್ಯೂ ವಿಸ್ತರಣೆ ಮಾಡಬೇಕಾಗುತ್ತದೆ. ಈ ವಿಚಾರ ಅಧಿಕಾರಿಗಳ ಹಾಗೂ ಜನರ ಕೈಯಲ್ಲಿದೆ ಎಂದು ಎಚ್ಚರಿಸಿದ್ದಾರೆ" ಎನ್ನಲಾಗಿದೆ.
"ಕೊರೊನಾ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿ ಜಿಲ್ಲಾಡಳಿತದ್ದು. ಜನರು ಬೆಳಗ್ಗೆ 6-10 ಗಂಟೆಯವರೆಗೆ ಮಾತ್ರ ಮನೆಯಿಂದ ಹೊರಬರುತ್ತಾರೆಯೇ, ಅಥವಾ ನಂತರವೂ ಅನಗತ್ಯವಾಗಿ ಓಡಾಡುತ್ತಿರುತಾರೋ, ಕೊರೊನಾ ನಿಯಮವನ್ನು ಪಾಲಿಸುತ್ತಾರೆಯೇ ಎನ್ನುವುದರತ್ತ ಗಮನಹರಿಸಬೇಕು" ಎಂದು ಅದೇಶಿಸಿದ್ದಾರೆ.