ನವದೆಹಲಿ, ಏ 29(DaijiworldNews/MS): ಭಾರತದಲ್ಲಿ ಕರೋನವೈರಸ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಿಸೈನ್ ಮೋದಿ (#ResignModi) ಹ್ಯಾಷ್ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನೆಟ್ಟಿಗರು ಅಭಿಯಾನ ಮಾಡಿರುವ ಪೋಸ್ಟ್ಗಳನ್ನು ಫೇಸ್ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.
ಪೋಸ್ಟ್ಗಳು ಬ್ಲಾಕ್ ಆಗುತ್ತಿದ್ದಂತೆ ನೆಟ್ಟಿಗರು "ಕೇಂದ್ರ ಸರ್ಕಾರದ ಆದೇಶದಂತೆ ನಿರ್ಬಂಧಿಸಲಾಗಿದೆ " ಎಂದು ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಫೇಸ್ ಬುಕ್ ಸಂಸ್ಥೆಗೆ ಟ್ವಿಟರ್ ಮೂಲಕ ಗಮನಕ್ಕೆ ತಂದಿದ್ದರು. ಫೇಸ್ಬುಕ್ ಸಂವಹನ ನೀತಿ ನಿರ್ದೇಶಕ ಆಂಡಿ ಸ್ಟೋನ್ ಟ್ವೀಟ್ ಮಾಡಿ " ಬಳಕೆದಾರರು ಟ್ವಿಟರ್ನಲ್ಲಿ ಸೂಚಿಸಿದ ನಂತರ ಹ್ಯಾಶ್ಟ್ಯಾಗ್ ಅನ್ನು ಪುನಃಸ್ಥಾಪಿಸಲಾಗಿದೆ ಬ್ಲಾಕ್ ಆಗಲು ಕಾರಣಗಳನ್ನು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದರು.
ಆ ಬಳಿಕ ಫೇಸ್ ಬುಕ್ ತಾಂತ್ರಿಕ ವಕ್ತಾರರು " ಭಾರತ ಸರ್ಕಾರ ಈ ಬಗ್ಗೆ ಕ್ರಮವಹಿಸಲು ಕೇಳಿರಲಿಲ್ಲ , ತಪ್ಪಾಗಿ ರಿಸೈನ್ ಮೋದಿ ಹ್ಯಾಷ್ಟ್ಯಾಗ್ಗೆ ಸಂಬಂಧಿಸಿದ ಪೋಸ್ಟ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಮುಂಜಾನೆ 1.20 ಕ್ಕೆ ಮರುಸ್ಥಾಪಿಸಲಾಗಿದೆ. ಈ ದೋಷವು ಲೇಬಲ್ಗೆ ಸಂಬಂಧಿಸಿದ ವಿಷಯದ ತಾಂತ್ರಿಕ ದೋಷದಿಂದ ಉಂಟಾಗಿದೆ ಹೊರತು, ಹ್ಯಾಷ್ಟ್ಯಾಗ್ ವಿಚಾರದಿಂದಲ್ಲ" ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ ಫೇಸ್ಬುಕ್ ಬಳಕೆದಾರರು ರಿಸೈನ್ ಮೋದಿ ಹ್ಯಾಷ್ಟ್ಯಾಗ್ ಹುಡುಕಾಡಿದರೆ, ' ಆ ಪೋಸ್ಟ್ಗಳಲ್ಲಿನ ಕೆಲವು ವಿಷಯವು ನಮ್ಮ ಸಮುದಾಯ ಮಾನದಂಡಗಳಿಗೆ ವಿರುದ್ಧವಾಗಿದೆ ಅವುಗಳು ತಾತ್ಕಾಲಿಕ ನಿರ್ಬಂಧಕ್ಕೆ ಒಳಪಟ್ಟಿವೆ' ಎಂಬ ಸಂದೇಶ ಮೂಡುತ್ತಿತ್ತು.
ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಉಂಟಾಗಿರುವ ಅವ್ಯವಸ್ಥೆ, ಅಮ್ಲಜನಕ ಕೊರತೆ, ಹಾಸಿಗೆ, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.