ನವದೆಹಲಿ, ಏ.29 (DaijiworldNews/MB) : ಕೊರೊನಾ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ನೀಡಿಕೆಗೆ ಕೇಂದ್ರ ಸರ್ಕಾರಕದ ನಿಯಮದ ವಿರುದ್ದ ಕಿಡಿಕಾರಿರುವ ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಜನರು ಸಾಯಬೇಕೆಂದು ನೀವು ಬಯಸಿದಂತೆ ಕಾಣುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಹೇಳಿದೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರನ್ನು ಒಳಗೊಂಡ ಪೀಠವು, ಹೊಸ ನಿಯಮದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದು, "ಆಕ್ಸಿಜನ್ ನೆರವು ಬೇಕಾದವರಿಗೆ ಮಾತ್ರ ರೆಮ್ಡೆಸಿವಿರ್ ನೀಡಲಾಗುವುದು ಎಂದು ಹೇಳುವುದು ತಪ್ಪು. ಈಗ ಆಮ್ಲಜನಕವಿಲ್ಲದ ಜನರಿಗೆ ರೆಮ್ಡೆಸಿವಿರ್ ಸಿಗುವುದಿಲ್ಲ. ಕೇಂದ್ರ ಸರ್ಕಾರ ಜನರು ಸಾಯಬೇಕೆಂದು ಬಯಸಿದಂತೆ ಕಾಣುತ್ತಿದೆ ಎಂದು ಕೇಂದ್ರದ ವಿರುದ್ದ ಗರಂ ಆಗಿದ್ದಾರೆ.
ಔಷಧದ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರವು ಪ್ರೋಟೋಕಾಲ್ ಅನ್ನು ಬದಲಾಯಿಸುತ್ತಿರುವಂತೆ ಕಾಣಿಸುತ್ತಿದೆ. ಇದ ಸಂಪೂರ್ಣವಾಗಿ ಅಸಮರ್ಪಕ ನಿರ್ವಹಣೆ ಎಂದು ಕೂಡಾ ದೆಹಲಿ ಹೈಕೋರ್ಟ್ ಅಭಿಪ್ರಾಯಿಸಿದೆ.