ನವದೆಹಲಿ, ಏ.29 (DaijiworldNews/MB) : ಇತ್ತೀಚೆಗೆ ತಮಿಳುನಾಡು ಕೇರಳ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು ಮೇ.2 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಆದರೆ, ಅಭ್ಯರ್ಥಿಗಳು ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಹೋಗಬೇಕಾದರೆ ಎರಡು ಡೋಸ್ ಕೊರೊನಾ ಲಸಿಕೆಯನ್ನೂ ಕಡ್ಡಾಯವಾಗಿ ಪಡೆಯಲೇಬೇಕು ಎಂದು ಚುನಾವಣಾ ಆಯೋಗ ಇಂದು ಸ್ಪಷ್ಟಪಡಿಸಿದೆ.
ಈಗಾಗಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಯಾವುದೇ ಕಾರಣಕ್ಕೂ ವಿಜಯೋತ್ಸವವನ್ನು ಆಚರಿಸಬಾರದು ಎಂದು ಹೇಳಿರುವ ಚುನಾವಣಾ ಆಯೋಗ, 48 ಗಂಟೆಗಳ ಒಳಗಿನ ಕೊರೊನಾ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆಯ ನಂತರವೇ ಅಭ್ಯರ್ಥಿಗಳು ಮತ್ತು ಅವರ ಏಜೆಂಟರನ್ನು ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶ ಪಡೆಯಲು ಅನುಮತಿ ನೀಡಲಾಗಿದೆ.
ಸೋಮವಾರವಷ್ಟೇ ಮದ್ರಾಸ್ ಹೈಕೋರ್ಟ್, ಕೊರೊನಾ ಹರಡುತ್ತಿರುವಾಗಲೂ ರಾಜಕೀಯ ರ್ಯಾಲಿಗಳನ್ನು ನಡೆಸಲು ಅವಕಾಶ ನೀಡಿದ್ದ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ''ಕೊರೊನಾ ಹರಡಿ ಜನರ ಸಾವು ಉಂಟಾಗಲು ಚುನಾವಣಾ ಆಯೋಗವೇ ಕಾರಣ. ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು'' ಎಂದು ವಾಗ್ದಾಳಿ ನಡೆಸಿತ್ತು.
ಇದಾದ ಕೂಡಲೇ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಗೆಲುವು ಸಾಧಿಸಿದ ಅಭ್ಯರ್ಥಿ ಯಾವುದೇ ಕಾರಣಕ್ಕೂ ವಿಜಯೋತ್ಸವವನ್ನು ಆಚರಿಸಬಾರದು ಎಂದು ಹೇಳಿತ್ತು.