ಮೈಸೂರು, ಎ.29 (DaijiworldNews/PY): "ಈ ಜಿಲ್ಲೆಯ ಜನರಿಗಾಗಿ ನಾನು ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಇಲ್ಲಿಯ ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ದ" ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಸೋಮಶೇಖರ್, "ನಾನು ಬದುಕಿದ್ದೇನಾ? ಅಥವಾ ಕೆ.ಆರ್.ನಗರದ ಶಾಸಕರು ಬದುಕಿದ್ದಾರಾ? ಎನ್ನುವುದನ್ನು ಜನರು ನಿರ್ಧರಿಸಲಿ. ಕೊರೊನಾ ಕುರಿತು ನಾನು ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ ಸಭೆ ಮಾಡಿದ್ದು, ಈ ಸಭೆಗೆ ಎಲ್ಲಾ ಕ್ಷೇತ್ರದ ಶಾಸಕರು ಬಂದು ಚರ್ಚಿಸಿದ್ದಾರೆ. ಆದರೆ, ಸಭೆಗೆ ಕೆ.ಆರ್.ನಗರದ ಶಾಸಕರು ಮಾತ್ರ ಬಂದಿಲ್ಲ. ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇರುತ್ತಿದ್ದರೆ ಸಭೆಗೆ ಹಾಜರಾಗಬೇಕಿತ್ತು. ಯಾರು ಬದುಕಿದ್ದಾರೆ ಎನ್ನುವುದನ್ನು ಈಗ ಜನರೇ ನಿರ್ಧರಿಸಬೇಕು" ಎಂದು ಹೇಳಿದ್ದಾರೆ.
"ವೆಂಟಿಲೇಟರ್, ಬೆಡ್ಗಳಿಗಾಗಿ ನನಗೂ ಕೂಡಾ ಕರೆಗಳು ಬರುತ್ತವೆ. ನಾನು ಯಾರ ಮೇಲೂ ಕೂಡಾ ಪ್ರಭಾವ ಬೀರಿಲ್ಲ. ಏಕೆಂದರೆ, ನನ್ನ ಪ್ರಭಾವದಿಂದ ಇನ್ನೊಬ್ಬ ರೋಗಿಗೆ ತೊಂದರೆ ಆಗಬಾರದು. ಇದು ನನ್ನ ಕಾರ್ಯವೈಖರಿ" ಎಂದಿದ್ದಾರೆ.