ಮುಂಬೈ, ಏ.29 (DaijiworldNews/MB) : ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಸೇರಿದಂತೆ 27 ಮಂದಿ ವಿರುದ್ದ ಭ್ರಷ್ಟಾಚಾರ ಆರೋಪದಡಿ ಮಹಾರಾಷ್ಟ್ರ ಪೊಲೀಸರು ವಿದರ್ಭದ ಅಕೊಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಸ್ತುತ ಅಕೊಲ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಭೀಮ್ ರಾವ್ ಘಡ್ಗೆ ಅವರು ಪರಮ್ ಬಿರ್ ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಇತರೆ ಆರೋಪಗಳನ್ನು ಮಾಡಿದ್ದರು. 2015ರಿಂದ 2018ರವರೆಗೆ ನಾನೂ ಕೂಡಾ ಥಾಣೆ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಈ ಸಂದರ್ಭದಲ್ಲಿ ಅಲ್ಲಿ ಅಧಿಕಾರಿಯಾಗಿದ್ದಾಗ ಪರಮ್ ಬಿರ್ ಸಿಂಗ್ ಭ್ರಷ್ಟಾಚಾರವೆಸಗಿದ್ದಾರೆ. ಇತರೆ ಅಧಿಕಾರಿಗಳು ಕೂಡಾ ಹಲವು ಭ್ರಷ್ಟಾಚಾರ ನಡೆಸಿದ್ದಾರೆ. ಎಫ್ಐಆರ್ ದಾಖಲಾಗಿರುವವರ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಬಾರದು ಎಂದು ಪರಮ್ ಬಿರ್ ಸಿಂಗ್ ಕೇಳಿಕೊಂಡಿದ್ದಾರೆ. ಆದರೆ ನಾನು ಅವರ ಮಾತನ್ನು ಕೇಳುತ್ತಿರಲಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ದ 5 ಎಫ್ಐಆರ್ಗಳನ್ನು ದಾಖಲಿಸಿ ಅಮಾನತು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ದೂರಿನ ಅನ್ವಯ ಅಕೊಲದಲ್ಲಿ ಕೊತ್ವಾಲಿ ಪೊಲೀಸರು ಪರಮ್ ಬಿರ್ ಸಿಂಗ್, ಡಿಸಿಪಿ ಪರಾಗ್ ಮನೆರೆ ಹಾಗೂ ಇತರ 26 ಮಂದಿ ಪೊಲೀಸರ ವಿರುದ್ಧ ಭ್ರಷ್ಟಾಚಾರ ಕೇಸು ದಾಖಲಿಸಿದ್ದಾರೆ. ಕ್ರಿಮಿನಲ್ ಪಿತೂರಿ, ಸಾಕ್ಷಿಗಳ ನಾಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ), 1989ರ ವಿವಿಧ ಸೆಕ್ಷನ್ ಗಳಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಝಿರೋ ಎಫ್ಐಆರ್ನ್ನು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು ನಂತರ ಅದನ್ನು ಥಾಣೆ ಸಿಟಿ ಪೊಲೀಸ್ ಗೆ ವಿಚಾರಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.