ನಾಗ್ಪುರ, ಎ.29 (DaijiworldNews/PY): 85 ವರ್ಷದ ವೃದ್ದರೋರ್ವರು 40 ವರ್ಷದ ವ್ಯಕ್ತಿಯ ಪ್ರಾಣ ಉಳಿಸಲು ತನ್ನ ಪ್ರಾಣ ತ್ಯಾಗ ಮಾಡಿದ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
85 ವರ್ಷದ ಕೊರೊನಾ ಪೀಡಿತ ನಾರಾಯಣ್ ದಾಭಲ್ಕರ್ ಅವರು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭ ಮಹಿಳೆಯೋರ್ವರು ನನ್ನ ಪತಿಗೆ ಕೊರೊನಾ ಸೋಂಕು ತಗುಲಿದೆ, ಅವರಿಗೆ ಬೆಡ್ ನೀಡಿ ಎಂದು ವೈದ್ಯರ ಬಳಿ ಬೇಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ನಾರಾಯಣ್ ಅವರು ತಾನು ಡಿಸ್ಚಾರ್ಜ್ ಆಗಿ ಆ ಸೋಂಕಿತನಿಗೆ ಬೆಡ್ ಬಿಟ್ಟುಕೊಡಲು ತೀರ್ಮಾನಿಸಿದರು. ಆಕ್ಸಿಜನ್ ಮಟ್ಟ ಕುಸಿಯುತ್ತಿದ್ದು, ಈ ಬಗ್ಗೆ ವೈದ್ಯರು ಎಷ್ಟೇ ಹೇಳಿದರೂ ಕೂಡಾ ಅವರ ಸಲಹೆಯನ್ನು ಕೇಳದೆ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾದರು.
ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದ ಕಾರಣ ಮನೆಗೆ ಬಂದ ಮೂರು ದಿನಗಳ ಬಳಿಕ ನಾರಾಯಣ್ ಅವರು ಕೊನೆಯುಸಿರೆಳೆದಿದ್ದಾರೆ. ಇದಕ್ಕೂ ಮೊದಲು ವೈದ್ಯರ ಬಳಿ ಮಾತನಾಡಿದ ದಾಭಲ್ಕರ್ ಅವರು, "ನನಗೆ 85 ವರ್ಷ, ನಾನು ನನ್ನ ಜೀವನವನ್ನು ನಡೆಸಿದ್ದೇನೆ. ಯುವಕರ ಜೀವ ಉಳಿಸುವುದು ಮುಖ್ಯ. ದಯವಿಟ್ಟು ನನ್ನ ಹಾಸಿಗೆಯನ್ನು ಅವರಿಗೆ ನೀಡಿ" ಎಂದು ಮನವಿ ಮಾಡಿದ್ದರು.
ನಾರಾಯಣ್ ದಾಭಲ್ಕರ್ ಅವರು ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ಇವರು ನಾಗ್ಪುರದಲ್ಲಿ ಚಾಕೋಲೇಟ್ ಚಿಕ್ಕಪ್ಪ ಎಂದೇ ಚಿರಪರಿಚಿತರು. ಅವರನ್ನು ಭೇಟಿ ಮಾಡಲು ಬಂದ ಎಲ್ಲರಿಗೂ ಅವರು ಚಾಕೋಲೇಟ್ ನೀಡಿ ಕಳುಹಿಸುತ್ತಿದ್ದರು.
"ಎಪ್ರಿಲ್ 22ರಂದು ಅವರ ಆಮ್ಲಜನಕದ ಮಟ್ಟ ಕಡಿಮೆಯಾದ ಸಂದರ್ಭ ನಾವು ಅವರನ್ನು ಐಜಿಆರ್ಗೆ ಕರೆದೊಯ್ದೆವು. ಹೆಚ್ಚಿನ ಪ್ರಯತ್ನದ ಬಳಿಕ ನಮಗೆ ಬೆಡ್ ಲಭಿಸಿತು. ಆದರೆ, ಒಂದೆರಡು ಗಂಟೆಗಳ ಬಳಿಕ ಅವರು ಮನೆಗೆ ವಾಪಾಸ್ಸಾದರು. ನನ್ನ ಕೊನೆಯ ಕ್ಷಣಗಳನ್ನು ನಮ್ಮೊಂದಿಗೆ ಕಳೆಯಲು ಆದ್ಯತೆ ನೀಡುವುದಾಗಿ ನನ್ನ ತಂದೆ ಹೇಳಿದರು" ಎಂದು ದಾಭಲ್ಕರ್ ಅವರ ಪುತ್ರಿ ತಿಳಿಸಿದ್ದಾರೆ.