ಚಿಕ್ಕಮಗಳೂರು, ಏ.29 (DaijiworldNews/MB) : ಇಂದು ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೇವರಕೊಡಿಗೆಯಲ್ಲಿ ನಡೆದಿದೆ. ವಿವಾಹದ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಈಗ ಸೂತಕದ ವಾತಾವರಣವಿದೆ.
ಮೃತ ಯುವಕ ದೇವರಕೊಡಿಗೆ ಗ್ರಾಮದ 32 ವರ್ಷದ ಪೃಥ್ವಿರಾಜ್.
ಯುವಕ ಪೃಥ್ವಿರಾಜ್ ಕಳೆದ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮನೆಗೆ ವಾಪಾಸ್ ಬಂದಿದ್ದು ಇಂದು ವಿವಾಹ ನಡೆಯಲಿತ್ತು. ಆದರೆ ಬೆಂಗಳೂರಿನಿಂದ ಬಂದ ಬಳಿಕ ಯುವಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕೊರೊನಾ ಸೋಂಕಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.