ಬೆಂಗಳೂರು, ಎ.29 (DaijiworldNews/PY): ಕೊರೊನಾದಿಂದ ಸಾವನ್ನಪ್ಪಿದ ಪತ್ನಿಯ ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ಸಿಬ್ಬಂದಿಗೆ ಅವಕಾಶ ನೀಡದ ವ್ಯಕ್ತಿಯೋರ್ವ ಪೊಲೀಸರು ಹಾಗೂ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಖಾಸಗಿ ಕಂಪೆನಿಯೊಂದರ ಉದ್ಯೋಗಿ ಶಿವು ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರ ಜೊತೆ ವಿದ್ಯಾರಣ್ಯಪುರದ ಸಿಂಗಾಪರದಲ್ಲಿ ವಾಸವಾಗಿದ್ದರು. ಶಿವು ಅವರ ಪತ್ನಿ ಗಿರಿಜಾ ಅವರಿಗೆ ಎಪ್ರಿಲ್ 26ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಮನೆಯಲ್ಲೇ ಐಸೋಲೇಶನ್ ಆಗಿದ್ದರು. ಎಪ್ರಿಲ್ 27ರ ಮಂಗಳವಾರ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಶಿವು ಹಾಗೂ ಮಕ್ಕಳು ನಾಲ್ಕೈದು ಆಸ್ಪತ್ರೆಗೆ ಅಲೆದಾಡಿದರೂ ಕೂಡಾ ಬೆಡ್ ಸಿಗಲಿಲ್ಲ. ಹಾಗಾಗಿ ಅವರು ಮನೆಗೆ ವಾಪಸ್ಸಾಗಿದ್ದು, ಗಿರಿಜಾ (41) ಅವರು ರಾತ್ರಿ 8 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಇದಾದ ನಂತರ ಪತಿಯು ಮದ್ಯಸೇವಿಸಿ ಬಿದ್ದಿದ್ದ. ಇದನ್ನು ನೋಡಿ ಕಂಗಾಲಾಗಿದ್ದ ಮಕ್ಕಳು ಅಳುತ್ತಿರುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಮಹಿಳೆ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ಸಿಬ್ಬಂದಿಗಳು ಹಾಗೂ ಪೊಲೀಸರು ಬಂದಾಗ ಶಿವು ಅವರನ್ನು ಒಳಗೆ ಬಾರದಂತೆ ತಡೆದಿದ್ದು, ಮೂರು ದಿನಗಳಿಂದ ಊಟ ಮಾಡಿಲ್ಲ ಎಂದು ಎಲ್ಲರೆದು ಊಟ ಮಾಡಿದ್ದು, ಕಾರ್ಪೊರೇಟರ್ ಬರುವವರೆಗೂ ಮೃತದೇಹವನ್ನು ನೀಡುವುದಿಲ್ಲ ಎಂದಿದ್ದಾರೆ. ಈ ವೇಳೆ ಶಿವು, ಸರ್ಕಾರ ಹಾಗೂ ಆರೋಗ್ಯ ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸುಮಾರು 1 ಗಂಟೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.