ನವದೆಹಲಿ, ಏ.29 (DaijiworldNews/MB) : ಮೇ 1ರಿಂದ ಆರಂಭವಾಗುವ ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿನ್ ಮತ್ತು ಆರೋಗ್ಯ ಸೇತು ಆ್ಯಪ್ಗಳಲ್ಲಿ ನೋಂದಣಿ ಮಾಡುವಾಗ ತಮಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮ ಮಾಡಿದ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ತಪ್ಪು ಹಾಗೂ ಆಧಾರರಹಿತ ವರದಿ. 80 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದಿದೆ. ಹಾಗೆಯೇ ಲಸಿಕೆಗಾಗಿ ಒಟ್ಟು 1.32 ಕೋಟಿಗೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸೇತು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ ಮೇ 1ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ಪ್ರಾರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಬುಧವಾರ ಮಧ್ಯಾಹ್ನ 4 ಗಂಟೆಯಿಂದ ಕೋವಿನ್ ಅಪ್ಲಿಕೇಶನ್ ಮತ್ತು ಕೋವಿಡ್ ಪೋರ್ಟಲ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಈ ಹಿನ್ನೆಲೆ ಬುಧವಾರ ಹಲವಾರು ಮಂದಿ ನೋಂದಣಿ ಮಾಡಿಸಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಈ ವೇಳೆ ಆ್ಯಪ್ನ ಸರ್ವರ್ ಡೌನ್ ಆದ ಕಾರಣ ಹಲವು ಸಮಸ್ಯೆ ಕಾಣಿಸಿಕೊಂಡಿದೆ. ಕೆಲವರು ನೋಂದಣಿಯ ಮೊದಲ ಮತ್ತು ಪ್ರಮುಖ ಹಂತದ ಒಟಿಪಿ ಪಡೆಯುವ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.
ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ''ಮಾಧ್ಯಮಗಳು ಸರ್ವರ್ ಕ್ರ್ಯಾಶ್ ಆಗಿದೆ ಎಂದು ಮಾಡಿರುವ ವರದಿಗಳು ತಪ್ಪಾದದ್ದು ಹಾಗೂ ಆಧಾರರಹಿತವಾದದ್ದು. ಕೋವಿನ್ ಡಿಜಿಟಲ್ ಪೋರ್ಟಲ್ನ ಸರ್ವರ್ ಅತ್ಯುತ್ತಮ ದಕ್ಷತೆ ಹೊಂದಿದೆ. ಪೋರ್ಟಲ್ ಮೂಲಕ ಹೆಚ್ಚಾಗಿ 18-44 ವಯಸ್ಸಿನವರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 4:00 ರಿಂದ 7:00 ಗಂಟೆಯವರೆಗೆ ಕೇವಲ 3 ಗಂಟೆಯಲ್ಲೇ 80 ಲಕ್ಷಕ್ಕೂ ಅಧಿಕ ಮಂದಿ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ'' ಎಂದು ಸ್ಪಷ್ಟನೆ ನೀಡಿದೆ.
ಇನ್ನು ಈ ಬಗ್ಗೆ ಆರೋಗ್ಯ ಸೇತು ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ''ನಾವು http://Cowin.gov.in ನಲ್ಲಿ 1.32 ಕೋಟಿಗೂ ಅಧಿಕ ನೋಂದಣಿಗಳೊಂದಿಗೆ ಮೊದಲ ದಿನದ ನೋಂದಣಿ ಸ್ಥಗಿತಗೊಳಿಸುತ್ತೇವೆ. ಅಳೆಯಲು ಸಾಧ್ಯವಾಗುವ ಹಾಗೂ ಸದೃಢವಾದ ಆನ್ಲೈನ್ ಪ್ಲಾಟ್ಫಾರ್ಮ್ ನಿರ್ಮಿಸಿದ ಟೀಮ್ ಕೋವಿನ್ಗೆ ಅಭಿನಂದನೆಗಳು. ಸೆಕೆಂಡಿಗೆ 50000 ಕ್ಕೂ ಹೆಚ್ಚು ಎಪಿಐ ಕರೆಗಳನ್ನು ನಿರ್ವಹಿಸುವುದು ಅಸಾಧಾರಣ'' ಎಂದು ಪ್ರಶಂಸಿಸಿದೆ.