ನವದೆಹಲಿ, ಏ 29(DaijiworldNews/MS): ಕೋವಿಶೀಲ್ಡ್ ಲಸಿಕೆ ಉತ್ಪಾದಕ , ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರಿಗೆ 'ವೈ' ವಿಭಾಗದ ಭದ್ರತೆಯನ್ನು ಗೃಹ ಸಚಿವಾಲಯ ಬುಧವಾರ ಅನುಮೋದಿಸಿದೆ. "ಸಂಭಾವ್ಯ ಬೆದರಿಕೆ" ಎದುರಿಸುತ್ತಿರುವ ಹಿನ್ನಲೆಯಲ್ಲಿ ಸಿಆರ್ಪಿಎಫ್ ಭಾರತದಾದ್ಯಂತ 'ವೈ' ಕೆಟಗರಿ ಭದ್ರತೆ ನೀಡಲಿದೆ.
ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಭದ್ರತೆ ಕೋರಿ ಪತ್ರ ಬರೆದ ನಂತರ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬಂದಿದೆ. ಕೋವಿಡ್ -19 ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ಆಧಾರ್ ಪೂನವಾಲಾ ಅವರಿಗೆ ವಿವಿಧ ಗುಂಪುಗಳಿಂದ ಬೆದರಿಕೆ ಬರುತ್ತಿದೆ ಎಂದು ಪ್ರಕಾಶ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪೂನವಾಲಾಗೆ "ಸಂಭವನೀಯ ಬೆದರಿಕೆಗಳನ್ನು" ಗಮನದಲ್ಲಿಟ್ಟುಕೊಂಡು ರಕ್ಷಣೆ ನೀಡಲಾಗಿದೆ.ಕೇಂದ್ರ ರಿಸರ್ವ್ ಪೊಲೀಸ್ ಪಡೆಯ(ಸಿಆರ್ಪಿಎಫ್) ಸಶಸ್ತ್ರ ಕಮಾಂಡೋಗಳು ಅವರು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸುವಾಗಲೆಲ್ಲಾ ಅವರೊಂದಿಗೆ ಇರುತ್ತಾರೆ. 'ವೈ' ಕೆಟಗರಿ ಭದ್ರತೆಯೂ 4-5 ಸಶಸ್ತ್ರ ಕಮಾಂಡೋಗಳನ್ನು ಹೊಂದಿರುತ್ತದೆ.
ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾದ ಎರಡು ಕೋವಿಡ್ -19 ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್ ಅನ್ನು ಎಸ್ಐಐ ತಯಾರಿಸುತ್ತಿದೆ.