ಜೌನ್ಪುರ, ಏ.28 (DaijiworldNews/MB) : ಶವಸಂಸ್ಕಾರಕ್ಕಾಗಿ ವೃದ್ಧರೊಬ್ಬರು ತನ್ನ ಪತ್ನಿಯ ಮೃತದೇಹವನ್ನು ಸೈಕಲ್ನಲ್ಲಿ ಹೊತ್ತುಕೊಂಡು ಹೋದ ಆಘಾತಕಾರಿ ಘಟನೆ ಉತ್ತರಪ್ರದೇಶದ ಜೌನ್ಪುರದಲ್ಲಿ ನಡೆದಿದ್ದು ಇದರ ಚಿತ್ರ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ವೃದ್ಧೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಸ್ಥಳೀಯ ಗ್ರಾಮಸ್ಥರು ಸೋಂಕಿನ ಹರಡುವಿಕೆಯ ಭಯದಿಂದ ಗ್ರಾಮದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಲಿಲ್ಲ.
ಈ ಹಿನ್ನೆಲೆ ಅಂತ್ಯ ಸಂಸ್ಕಾರ ಮಾಡಲು ಸ್ಥಳವನ್ನು ಹುಡುಕಿಕೊಂಡು ವೃದ್ದ ತನ್ನ ಪತ್ನಿಯ ಶವವನ್ನು ತನ್ನ ಸೈಕಲ್ನಲ್ಲಿಇರಿಸಿಕೊಂಡು ಗಂಟೆಗಟ್ಟಲೆ ಸಾಗಿದ್ದಾರೆ.
ಚಿತ್ರವೊಂದರಲ್ಲಿ ವೃದ್ದನು ಆಯಾಸದಲ್ಲಿ ರಸ್ತೆ ಬದಿಯಲ್ಲಿ ಕುಳಿತ್ತಿದ್ದು, ವೃದ್ದೆಯ ಮೃತದೇಹ ಹಾಗೂ ಸೈಕಲ್ ರಸ್ತೆಯಲ್ಲಿದೆ.
ಇನ್ನು ಈ ವಿಚಾರ ಜೌನ್ಪುರ ಪೊಲೀಸರ ಗಮನಕ್ಕೆ ಬಂದ ಬಳಿಕ ಪೊಲೀಸರು ಮಂಗಳವಾರ ರಾಮ್ಘಾಟ್ನಲ್ಲಿ ಮಹಿಳೆಯ ಅಂತಿಮ ವಿಧಿಗಳನ್ನು ನಡೆಸಿದ್ದಾರೆ.
ಸೋಮವಾರ ವೃದ್ದೆಯ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದು ಆಸ್ಪತ್ರೆಯು ಆಂಬುಲೆನ್ಸ್ನಲ್ಲಿ ಆಕೆಯ ಮೃತದೇಹವನ್ನು ಕಳುಹಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ವೃದ್ದೆಯ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಲು ಸ್ಥಳೀಯ ಜನರು ಮುಂದೆ ಬರಲಿಲ್ಲ. ಹಳ್ಳಿಯ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ ಮೃತ ವೃದ್ದೆಗೆ ಕೊರೊನಾ ಪಾಸಿಟಿವ್ ಆಗಿತ್ತೆ ಎಂಬುದನ್ನು ಈವರೆಗೂ ಜಿಲ್ಲಾಡಳಿತ ದೃಢಪಡಿಸಿಲ್ಲ.