ಮುಂಬೈ, ಏ.28 (DaijiworldNews/MB) : ಮಹಾರಾಷ್ಟ್ರದಲ್ಲಿ ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ ನಡೆದಿದ್ದು, ಈ ಸಂದರ್ಭ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ 14 ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಪ್ರಿಲ್ 21 ರಂದು ಅನಿಲ ಸೋರಿಕೆ ಘಟನೆಯಲ್ಲಿ ನಾಸಿಕ್ನ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಠ 22 ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಮಹಾರಾಷ್ಟ್ರದ ಪರಭಾನಿ ಜಿಲ್ಲಾ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಸೋರಿಕೆಯಾಗಿದ್ದು ಆದರೆ ಆಸ್ಪತ್ರೆಯ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ 14 ರೋಗಿಗಳು ಬದುಕುಳಿದಿದ್ದಾರೆ.
ಆಕ್ಸಿಜನ್ ಅನಿಲ ಪೈಪ್ಗಳ ಮೇಲೆ ಮರದಕೊಂಬೆ ಬಿದ್ದು ಪೈಪ್ ತುಂಡಾಗಿದ್ದು ಆಕ್ಸಿಜನ್ ಸೋರಿಕೆಯಾಗುತ್ತಿತ್ತು. ಇದನ್ನು ಮಂಗಳವಾರ ತಡರಾತ್ರಿ ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ರೋಗಿಗಳಿಗೆ ಉಸಿರಾಟಕ್ಕಾಗಿ ಜಂಬೊ ಆಕ್ಸಿಜನ್ ಸಿಲಿಂಡರ್ಗಳನ್ನು ಅಳವಡಿಸಿ ಅಲ್ಲಿಂದ ಸ್ಥಳಾಂತರ ಮಾಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪ ಜಿಲ್ಲಾಧಿಕಾರಿ ಸಂಜಯ್ ಕುಂದೇತ್ಕರ್, ''ರಾತ್ರಿ ಸುಮಾರು 11.30 ರ ಸುಮಾರಿಗೆ ಮರದ ಕೊಂಬೆ ಬಿದ್ದು ಆಕ್ಸಿಜನ್ ಸೋರಿಕೆಯಾಗಿದ್ದು 14 ಮಂದಿ ರೋಗಿಗಳು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಸೋರಿಕೆಯಾಗುತ್ತಿರುವುದು ಸಿಬ್ಬಂದಿಗಳ ಗಮನಕ್ಕೆ ಬಂದಿದ ತಕ್ಷಣ ಸಿಬ್ಬಂದಿಗಳು ಸಮಯ ಪ್ರಜ್ಞೆ ಮೆರೆದು ರೋಗಿಗಳಿಗೆ ಜಂಬೋ ಆಕ್ಸಿಜನ್ ಸಿಲಿಂಡರ್ಗಳನ್ನು ಅಳವಡಿಸಿ ಬೇರೆ ಸುರಕ್ಷಿತ ವಾರ್ಡ್ಗೆ ಸ್ಥಳಾಂತರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ'' ಎಂದು ತಿಳಿಸಿದ್ದಾರೆ.
''ಬಳಿಕ ಸೋರಿಕೆಯನ್ನು ಸರಿಪಡಿಸಲು ದುರಸ್ತಿ ಕಾರ್ಯ ನಡೆಸಲು ಆಕ್ಸಿಜನ್ ಪೂರೈಕೆಯನ್ನು ಕೇವಲ 2-3 ನಿಮಿಷಗಳ ಸ್ಥಗಿತಗೊಳಿಸಲಾಗಿತ್ತು. ತಂತ್ರಜ್ಞರು ಎರಡು ಗಂಟೆಗಳಲ್ಲಿ ಪೈಪ್ಲೈನ್ ದುರಸ್ತಿ ಮಾಡಿದ್ದಾರೆ'' ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಇನ್ನು ''ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಳಿಗ್ಗೆ 4 ಗಂಟೆ ಸುಮಾರಿಗೆ ಆಮ್ಲಜನಕ ಪೂರೈಕೆಯನ್ನು ಮರುಸ್ಥಾಪನೆ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.