ನವದೆಹಲಿ, ಏ.28 (DaijiworldNews/MB) : ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಸಾವು ಪ್ರಕರಣಕ್ಕೆ ಸಂಬಂಧಿಸಿ ಹತ್ರಾಸ್ಗೆ ಭೇಟಿ ನೀಡುವ ವೇಳೆ ಉತ್ತರ ಪ್ರದೇಶ ಪೋಲೀಸರಿಂದ ಬಂಧನಕ್ಕೆ ಒಳಗಾಗಿರುವ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರ ಮಾಡಿ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಹತ್ರಾಸ್ನಲ್ಲಿ 2020ರ ಸೆಪ್ಟೆಂಬರ್ 14 ರಂದು ಗ್ಯಾಂಗ್ ರೇಪ್ಗೆ ಒಳಗಾಗಿ ಸಾವನ್ನಪ್ಪಿದ್ದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಕೇರಳ ಮೂಲದ ಪತ್ರಕರ್ತ ಕಪ್ಪನ್ ತೆರಳುತ್ತಿದ್ದ ಸಂದರ್ಭ ಅವರನ್ನು ಬಂಧಿಸಲಾಗಿತ್ತು. ಮಥುರಾ ಜೈಲಿನಲ್ಲಿ ಕಪ್ಪನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ನಿಟ್ಟಿನಲ್ಲಿ ಕಪ್ಪನ್ ಅವರ ಪತ್ನಿ, ಕೊರೊನಾ ದೃಢಪಟ್ಟ ನನ್ನ ಪತಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈ ಕಾರಣದಿಂದಾಗಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಹಾಗೆಯೇ ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್(ಕೆಯುಡಬ್ಲ್ಯೂಜೆ) ಕೂಡಾ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ, ನಾವು ಪ್ರಕರಣದ ಅಂಶಗಳನ್ನು ಪರಿಗಣಿಸಿ, ರಿಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದ್ದೇವೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಗಂಭೀರ ವಿರೋಧದ ಮಧ್ಯೆಯೂ, ನಾವು ಆರೋಪಿಯನ್ನು ದೆಹಲಿಯ ಆರ್ಎಂಎಲ್ ಅಥವಾ ಎಐಐಎಂಎಸ್ ಅಥವಾ ಬೇರೆ ಯಾವುದೇ ಉತ್ತಮ ಆಸ್ಪತ್ರೆಗೆ ವರ್ಗಾಯಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಹೇಳಿದೆ.
ಇನ್ನು ಈ ಸಂದರ್ಭದಲ್ಲಿ ಸಿದ್ದಿಕ್ ಕಪ್ಪನ್ ಅವರಿಗೆ ರಾಜ್ಯದ ಹೊರಗಡೆ ಚಿಕಿತ್ಸೆ ಕೊಡಿಸಬೇಕೆಂಬ ನ್ಯಾಯಪೀಠದ ಸಲಹೆಗೆ ವಿರೋಧ ವ್ಯಕ್ತಪಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಹು ಅಂಗಾಂಗ ವೈಫಲ್ಯದ ಜನರನ್ನು ಮಥುರಾದ ಜೈಲು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹೀಗಿರುವಾಗ ಕಪ್ಪನ್ಗೆ ಸ್ಥಳಾಂತರವೇಕೆ. ಕಪ್ಪನ್ ಅವರ ಕೊರೊನಾ ವರದಿ ನೆಗೆಟಿವ್ ಆಗಿದೆ. ಹಾಗಾಗಿ ಅವರಿಗೆ ಮಥುರಾ ಜೈಲಿನಲ್ಲೇ ಚಿಕಿತ್ಸೆ ಕೊಡಿಸಬಹುದು ಎಂದು ವಾದಿಸಿದ್ದಾರೆ.
ಉತ್ತರಪ್ರದೇಶದ ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪೋಷಕರ ಒಪ್ಪಿಗೆಯಿಲ್ಲದೆಯೇ ಪೊಲೀಸರು ರಾತ್ರೋರಾತ್ರಿ ಸಂತ್ರಸ್ಥ ಯುವತಿಯ ಅಂತ್ಯಕ್ರಿಯೆ ನಡೆಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.