ಬೆಂಗಳೂರು, ಎ.28 (DaijiworldNews/PY): "ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಕಡ್ಡಾಯ ಕ್ವಾರಂಟೈನ್ ಹಾಗೂ ಸೋಂಕು ಪರೀಕ್ಷೆ ನಿಯಮ ರೂಪಿಸಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೋಂಕನ್ನು ರಾಜ್ಯದಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ?" ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದೆ
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಎಂಟಿಬಿ ನಾಗರಾಜ್ ತಮಗೇ ಬೆಡ್ ಸಿಗ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು. ಸಚಿವ ಮಾಧುಸ್ವಾಮಿ ಪ್ರಭಾವಕ್ಕೂ ಬೆಡ್ ಸಿಗಲಿಲ್ಲ. ಮಂತ್ರಿಗಳಿಗೆ ಹೀಗೆ, ಸಾಮಾನ್ಯರ ಇನ್ನೂ ಸ್ಥಿತಿ ಭೀಕರ ಕಳೆದ ವರ್ಷದ 10.000 ಬೆಡ್ಗಳ ಬಿಐಎಸಿ ಕೋವಿಡ್ ಸೆಂಟರ್ ಎಲ್ಲಿ ಹೋಯ್ತು? ಇಷ್ಟೆಲ್ಲ ಸಮಸ್ಯೆ ಇದ್ದರೂ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ ಸಚಿವ ಸುಧಾಕರ್ ಅವರೇ?" ಎಂದು ಪ್ರಶ್ನಿಸಿದೆ.
"ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನ ಹಾಗೂ ಪೂರ್ವ ತಯಾರಿ ಇಲ್ಲದ ಏಕಾಏಕಿಯ ಲಾಕ್ಡೌನ್ನಿಂದಾಗಿ ಸೋಂಕು ನಿಯಂತ್ರಿಸುವ ಬದಲಿಗೆ ಇನ್ನಷ್ಟು ಹಬ್ಬಿಸಲು ಕಾರಣವಾಗಲಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ಗಳನ್ನು ಉಪಯೋಗಿಸಿಕೊಂಡು ಶೇ 50ರಷ್ಟು ನಿಯಮ ಪಾಲನೆಯಲ್ಲಿ ಸಾರಿಗೆ ವ್ಯವಸ್ಥೆ ನಿರ್ಮಿಸಬಹುದಿತ್ತು. ಆದರೆ, ಸರ್ಕಾರ ಕಂಬಳಿ ಹೊದ್ದು ಮಲಗಿದೆ" ಎಂದು ಕಿಡಿಕಾರಿದೆ.
"ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಕಡ್ಡಾಯ ಕ್ವಾರಂಟೈನ್ ಹಾಗೂ ಸೋಂಕು ಪರೀಕ್ಷೆ ನಿಯಮ ರೂಪಿಸಿಲ್ಲ. ನಗರಗಳಲ್ಲಿ, ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಂಟಿದ ಸೋಂಕು ಹಳ್ಳಿ ಹಳ್ಳಿಗಳಿಗೆ ತಲುಪಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೋಂಕನ್ನು ರಾಜ್ಯದಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ?" ಎಂದು ಕೇಳಿದೆ.
"ಬಿಎಸ್. ಯಡಿಯೂರಪ್ಪ ಅವರೇ, ಸಚಿವ ಸುಧಾಕರ್ ಅವರೇ, ಮತ್ತೆ ಮತ್ತೆ ಕೇಳುತ್ತೇವೆ. ಕಳೆದ ವರ್ಷ 10,000 ಹಾಸಿಗೆಗಳ ಕೋವಿಡ್ ಸೆಂಟರ್ನ್ನು ಭಾರಿ ಪ್ರಚಾರಕ್ಕೆ ಮಾತ್ರ ಬಳಸಿಕೊಂಡು ರೋಗಿಗಳಿಗೆ ಬಳಸದೆ ಮುಚ್ಚಿದ್ದೇಕೆ?. ಎಷ್ಟು ಕೋಟಿ ಹಣ ವ್ಯರ್ಥ? ಎಷ್ಟು ಲೂಟಿ ಹೊಡೆದಿರಿ?. ಬೆಡ್ ಸಮಸ್ಯೆ ಬಗೆಹರಿಸಲು ಇದುವರೆಗೆ ಯಾವುದೇ ಕಾರ್ಯಸೂಚಿ ಇಲ್ಲದಿರುವುದೇಕೆ?" ಎಂದು ಪ್ರಶ್ನಿಸಿದೆ.