ಉತ್ತರಪ್ರದೇಶ, ಎ.28 (DaijiworldNews/PY): ನರ್ಸ್ ಒಬ್ಬರು ಕರ್ತವ್ಯನಿರತ ವೈದ್ಯರಿಗೆ ಕಪಾಳಮೋಕ್ಷ ಮಾಡಿದ ಘಟನೆ ಉತ್ತರಪ್ರದೇಶದ ರಾಂಪುರ ಆಸ್ಪತ್ರೆಯಲ್ಲಿ ನಡೆದಿದೆ.
ರೋಗಿಗಳಿಂದ ತುಂಬಿದ್ದ ವೈದ್ಯರಿದ್ದ ಕೊಠಡಿಗೆ ಬಂದ ನರ್ಸ್ ಮೃತರೋರ್ವರ ಮರಣ ಪ್ರಮಾಣಪತ್ರ ಕೊಡುವಂತೆ ಕೇಳಿದ್ದರು ಎಂದು ವರದಿ ತಿಳಿಸಿದೆ.
ಈ ಸಂದರ್ಭ ನರ್ಸ್ ಹಾಗೂ ವೈದ್ಯರ ನಡುವೆ ವಾಗ್ವಾದ ಆರಂಭವಾಗಿದೆ. ಈ ವೇಳೆ ನರ್ಸ್ ವೈದ್ಯರ ಕಪಾಳಕ್ಕೆ ಹೊಡೆದಿದ್ದು, ವೈದ್ಯರೂ ಕೂಡಾ ನರ್ಸ್ಗೆ ಹೊಡೆದಿದ್ದಾರೆ. ಈ ಘಟನೆ ಕ್ಯಾಮಾರದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಂಪುರ ಮ್ಯಾಜಿಸ್ಟ್ರೇಟ್ ರಾಮ್ ಜಿ ಮಿಶ್ರಾ, ವೈದ್ಯರು ಹಾಗೂ ನರ್ಸ್ ಜೊತೆ ನಾನು ಮಾತನಾಡಿದ್ದೇನೆ. ಕೆಲಸದ ಒತ್ತಡದ ಪರಿಣಾಮ ಈ ರೀತಿ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಘಟನೆ ನಡೆದರೂ ಕೂಡ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ನ್ಯಾಯಾಧಿಕಾರಿ ರವೀಂದ್ರ ಕುಮಾರ್ ಆದೇಶಿಸಿದ್ದಾರೆ.