ಬೆಂಗಳೂರು,ಏ 28 (DaijiworldNews/MS): " ಕೊರೊನಾ 2ನೇ ಅಲೆಯ ಪರಿಣಾಮದ ಬಗ್ಗೆ ತಜ್ಞರ ವರದಿಯನ್ನೇ ಸರ್ಕಾರ ಕಾಲ ಕಸದಂತೆ ಕಂಡಿದ್ದು , ಅದನ್ನು ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ " ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ದ ಹರಿಹಾಯ್ದಿದ್ದು, "ಕೋವಿಡ್ 2ನೇ ಅಲೆಯ ಪರಿಣಾಮದ ಬಗ್ಗೆ ಕಳೆದ ನವೆಂಬರ್ನಲ್ಲಿ ತಜ್ಞರು ಕೊಟ್ಟಿದ್ದ ವರದಿಯನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು.ಅದರ ಪರಿಣಾಮವನ್ನು ರಾಜ್ಯದ ಜನ ಈಗ ಅನುಭವಿಸುತ್ತಿದ್ದಾರೆ. ಸರ್ಕಾರ ಅಂದು ತಜ್ಞರ ವರದಿಯನ್ನು ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ" ಎಂದು ಕಿಡಿಕಾರಿದ್ದಾರೆ.
"ರಾಜ್ಯ ಸರ್ಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೊನಾ ಸಾವಿನ ಹಿಂದೆಯೂ ಸರ್ಕಾರದ ಬೇಜವಾಬ್ದಾರಿಯದೆ. ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ..? " ಎಂದು ಪ್ರಶ್ನಿಸಿದ್ದಾರೆ.
"ಕೊರೊನಾ ಭೀಕರತೆಯ ಬಗ್ಗೆ ವಿಪಕ್ಷಗಳು ಆಗಲೇ ಸರ್ಕಾರವನ್ನು ಎಚ್ಚರಿಸಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಯಾವಾಗ ಕಿವಿಗೆ ಹಾಕಿಕೊಂಡು ಪಾಲಿಸಿದೆ ಎಂದು ಸಿ.ಟಿ.ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ವಿಪಕ್ಷಗಳ ಎಚ್ಚರಿಕೆ ಅಂದು ಕೂಡ ಸರ್ಕಾರಕ್ಕೆ ಅಪಥ್ಯವಾಗಿತ್ತು,ಇಂದು ಕೂಡ ಅಪಥ್ಯವಾಗಲಿದೆ. ಕೊರೊನಾ 2ನೇ ಅಲೆಯ ಪರಿಣಾಮದ ಬಗ್ಗೆ ತಜ್ಞರ ವರದಿಯನ್ನೇ ಕಾಲ ಕಸ ಮಾಡಿಕೊಂಡಿದ್ದ ಈ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಪಾಲಿಸಲು ಸಾಧ್ಯವಿತ್ತೆ..? ಹೊರುವವನಿಗೆ ಹೆಗಲು ಭಾರ ಎಂಬಂತೆ ಸಿ.ಟಿ.ರವಿಯವರು ನೆಪ ಹೇಳುವುದನ್ನು ಬಿಟ್ಟು ತಮ್ಮ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಒಪ್ಪಿಕೊಳ್ಳಲಿ. ಕನಿಷ್ಟ ಆಗಲಾದರೂ ಮಾಡಿದ ಪಾಪದ ಭಾರ ಕಡಿಮೆಯಾಗಬಹುದು" ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ.