ಬೆಂಗಳೂರು, ಏ.27 (DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳಿಗೆ ಬಿಲ್ ಪಾವತಿಸಲಾಗದೇ ಜನರು ಕಂಗಲಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹವನ್ನೇ ಪತ್ನಿ ಬಿಟ್ಟು ಹೋದ ಘಟನೆ ನಡೆದಿದ್ದು, ಆಸ್ಪತ್ರೆಯ ಬಿಲ್ ಕಟ್ಟಿಲ್ಲವೆಂದು ಮೃತದೇಹ ನೀಡಿಲ್ಲ ಎಂದು ಮೃತ ಸೋಂಕಿತನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಇನ್ನು ಕಳೆದ ನಾಲ್ಕು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿಯೇ ಮೃತದೇಹವಿದ್ದು, ಆಸ್ಪತ್ರೆ ಸಿಬ್ಬಂದಿ 4 ಲಕ್ಷ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಆದರೆ ಮಹಿಳೆಗೆ ದಿಕ್ಕು ತೋಚದೆ 4 ಲಕ್ಷ ಹಣ ಇಲ್ಲ, ನೀವೇ ಅಂತ್ಯಸಂಸ್ಕಾರ ಮಾಡಿ ಎಂದು ಹೇಳಿ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ.
4 ದಿನಗಳಿಂದ ನನ್ನ ತಂದೆಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು, ಸ್ವಲ್ಪ ಜ್ವರ ಕೆಮ್ಮು ಇತ್ತು. ನಂತರ ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದು, ಬಿಬಿಎಂಪಿಯವರಿಗೆ ನಾವು ಕಾಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದ್ದು ಮೊದಲಿಗೆ 50 ಸಾವಿರ ಅಡ್ವಾನ್ಸ್ ಹಣ ಕಟ್ಟಿ ಎಂದಿದ್ದರು. ನಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ 20 ಸಾವಿರ ಕಟ್ಟಿದ್ದೇವೆ. ಮೊದಲಿಗೆ ಶೇ.30ರಷ್ಟು ಸೋಂಕಿನಿಂದ ಗುಣಮುಖ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು ಆದರೆ ಆದಾಗಿ ಎರಡು ದಿನಗಳ ನಂತರ ತಂದೆ ತೀರಿಕೊಂಡಿದ್ದಾರೆ ಎಂದು ಸೋಂಕಿತನ ಮಗಳು ಆರೋಪ ಮಾಡಿದ್ದಾರೆ.