ನವದೆಹಲಿ, ಏ.27 (DaijiworldNews/MB) : ''ಕೊರೊನಾದಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ'' ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ನ್ಯಾ.ಎಲ್.ಎನ್.ರಾವ್ ಮತ್ತು ನ್ಯಾ.ರವೀಂದ್ರ ಎಸ್ ಭಟ್ ನೇತೃತ್ವದ ತ್ರಿಸದಸ್ಯ ಪೀಠವು ದೇಶದ ವಿವಿಧ ಹೈಕೋರ್ಟ್ಗಳಲ್ಲಿ ಕೊರೊನಾ ಸಂಬಂಧ ದಾಖಲಾಗಿರುವ ಅರ್ಜಿಗಳ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದೆ.
ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭ ಸುಪ್ರೀಂ ಕೋರ್ಟ್ ಸುಮ್ಮನಿರಲಾಗದು. ಕೆಲವು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ಮಾತನಾಡಬೇಕಿದೆ. ಆದರೆ ವಿವಿಧ ರಾಜ್ಯಗಳಲ್ಲಿನ ಅರ್ಜಿಗಳನ್ನು ಹೈಕೋರ್ಟ್ಗಳು ಆಲಿಸುವುದನ್ನು ತಡೆಯುವ ಉದ್ದೇಶವನ್ನು ನಮ್ಮ ಪೀಠ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದು ಹೈಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸುವುದಕ್ಕೆ ನಾವು ತಡೆಯಾಗುತ್ತಿಲ್ಲ ಎಂದೂ ಹೇಳಿದೆ.
ಹೈಕೋರ್ಟ್ಗಳಿಗೆ ತನ್ನ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ನಿರ್ವಹಿಸುವ ಕಾರ್ಯಕ್ಷಮತೆ ಇದೆ. ಆದರೆ ಕೆಲವು ಪ್ರಕರಣಗಳಿಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗಿದೆ ಎಂದು ಹೇಳಿದ ಸರ್ವೋಚ್ಛ ನ್ಯಾಯಾಲಯ, ಹೈಕೋರ್ಟ್ಗಳಿಗೆ ಪ್ರಾದೇಶಿಕ ಮಿತಿ ಇರುವ ಹಿನ್ನೆಲೆ ಆ ಸಮಸ್ಯೆಗಳನ್ನು ಎದುರಿಸಲು ಹೈಕೋರ್ಟ್ಗಳಿಗೆ ಯಾವುದೇ ತೊಂದರೆಯಿಲ್ಲ. ಆದರೆ ನಾವು ಹೈಕೋರ್ಟ್ಗಳಿಗೆ ಸಹಾಯ ಮಾಡುತ್ತೇವೆ ಎಂದು ಪೀಠವು ಭರವಸೆ ನೀಡಿದೆ.
ಕೊರೊನಾ ಬಿಕ್ಕಟ್ಟಿನಲ್ಲಿ ಆಮ್ಲಜನಕ, ಔಷಧಿಗಳು, ಲಸಿಕೆಗಳು ಮತ್ತು ಇತರ ಸರಬರಾಜುಗಳ ಕುರಿತಂತೆ ದೇಶದ ಸುಪ್ರೀಂ ಕೋರ್ಟ್ನಲ್ಲಿ ಸಾಕಷ್ಟು ಅರ್ಜಿಗಳು ದಾಖಲಾಗಿವೆ. ವಿವಿಧ ಹೈಕೋರ್ಟ್ಗಳಲ್ಲೂ ದಾಖಲಾಗುತ್ತಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ನ ಈ ನಡೆಯನ್ನು ನಿವೃತ್ತ ನ್ಯಾಯಮೂರ್ತಿ ಎಸ್ ಎ ಬಾಬ್ಡೆ ಟೀಕೆ ಮಾಡಿದ್ದರು.
ಈ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದ್ದು, ಹೈಕೋರ್ಟ್ ಪ್ರಕರಣಗಳನ್ನು ಹೈಜಾಕ್ ಮಾಡುವುದು ಇದರ ಉದ್ದೇಶವಲ್ಲ. ಇಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲೂ ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಹೇಳಿದೆ.