ಬೆಂಗಳೂರು, ಏ.27 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಆತಂಕಕ್ಕೆ ಒಳಗಾದ ಹಲವಾರು ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳುತ್ತಿದ್ದಾರೆ. ಆದರೆ ''ಸರ್ಕಾರ ಊರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಜೊತೆಗೆ ಸೋಂಕು ಪರೀಕ್ಷೆ, ಐಸೋಲೇಶನ್ ನಿಯಮ ರೂಪಿಸಿಲ್ಲ. ಇದು ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ'' ಎಂದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಹಿಂದಿನ ಲಾಕ್ಡೌನ್ನಿಂದ ಗಾರ್ಮೆಂಟ್ಸ್ ಉದ್ಯಮ ಇನ್ನೂ ಹೊರಬಂದಿಲ್ಲ, ನಷ್ಟದಿಂದ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾದರು. ಈಗ ಮತ್ತೆ ಲಾಕ್ಡೌನ್. ಕಾರ್ಮಿಕರ ಆರ್ಥಿಕ & ಉದ್ಯೋಗ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಬಿ ಎಸ್ ಯಡಿಯೂರಪ್ಪ ಅವರೇ ನಿಮ್ಮ ಜಾಣ್ಮೆಯನ್ನು ಹೊಣೆಗಾರಿಕೆಯಿಂದ ಜಾರಿಕೊಳ್ಳುವುದರ ಬದಲು ನೆರವು ನೀಡಲು ಬಳಸಿ'' ಎಂದು ಟೀಕಿಸಿದೆ.
''ಕಾರ್ಮಿಕರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ, ತಮ್ಮಂದಿಗೆ ಸೋಂಕನ್ನು ಕೂಡ ಕೊಂಡೊಯುತ್ತಿದ್ದಾರೆ. ಹಣದ ನೆರವು, ಆಹಾರದ ಭದ್ರತೆ ನೀಡಿ ಇದ್ದಲ್ಲಿಯೇ ಉಳಿಸಬಹುದಾದ ಅವಕಾಶವನ್ನು ಸರ್ಕಾರ ಬಳಸಲಿಲ್ಲ. ಊರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಜೊತೆಗೆ ಸೋಂಕು ಪರೀಕ್ಷೆ, ಐಸೋಲೇಶನ್ ನಿಯಮ ರೂಪಿಸದಿರುವುದು ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ'' ಎಂದು ವಾಗ್ದಾಳಿ ನಡೆಸಿದೆ.
''ಟೆಸ್ಟ್ , ಟ್ರ್ಯಾಕ್, ಟ್ರೀಟ್ ಮೂರನ್ನೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುವವರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಿಲ್ಲ. ತೆರಳಿದವರಿಗೆ ಊರುಗಳಲ್ಲಿ ಟೆಸ್ಟಿಂಗ್ ಹಾಗೂ ಐಸೋಲೇಶನ್ ನಿಯಮ ರೂಪಿಸಿಲ್ಲ'' ಎಂದು ಟೀಕೆ ಮಾಡಿರುವ ಕಾಂಗ್ರೆಸ್, ''ಸುಧಾಕರ್ ಅವರೇ, ಕೂಡಲೇ ಗ್ರಾಮೀಣ ಭಾಗದತ್ತ ಗಮನಹರಿಸಿ ಸೋಂಕು ಹರಡದಂತೆ ತಡೆಗಟ್ಟಿ'' ಎಂದು ಒತ್ತಾಯಿಸಿದೆ.