ಮುಂಬೈ, ಏ 27 (DaijiworldNews/MS): ಒಂದೇ ಆಂಬುಲೆನ್ಸ್ ಒಳಗೆ 22 ಕರೊನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಂಬಾಜೋಗೈನ ಸ್ವಾಮಿ ರಾಮಾನಂದ್ ತೀರ್ಥ್ ಮರಾಠವಾಡ ಸರ್ಕಾರಿ ವೈದ್ಯಕೀಯ ಕಾಲೇಜಿನ (ಎಸ್ಆರ್ಟಿಎಂಜಿಎಂಸಿ) ಶವಾಗಾರದಲ್ಲಿದ್ದ ಮೃತದೇಹಗಳು ಇದಾಗಿದ್ದು ಬಾಡಿ ಬ್ಯಾಗ್ಗಳಲ್ಲಿ ಇರಿಸಿ ಶವಗಳನ್ನು ಒಂದರ ಮೇಲೋಂದರಂತೆ ಇರಿಸಿ ಸಾಗಿಸಿದ್ದಾರೆ
ಆಂಬುಲೆನ್ಸ್ನಲ್ಲಿದ್ದ ಶವಗಳಲ್ಲಿ 14 ಶವಗಳು ಶನಿವಾರ ಸತ್ತವರದ್ದಾಗಿದ್ದರೆ ಇನ್ನುಳಿದ ಶವಗಳು ಭಾನುವಾರ ಸತ್ತವರದ್ದು ಎನ್ನಲಾಗಿದೆ. 22 ಸೋಂಕಿತರ ಶವಗಳನ್ನು ತುಂಬಿಸಿ, ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ. ಆಂಬುಲೆನ್ಸ್ನಲ್ಲಿ ತುಂಬಿದ್ದ ಶವಗಳ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದಹಲವರ ಮೊಬೈಲ್ ಗಳನ್ನು ಆಂಬುಲೆನ್ಸ್ ಬಳಿ ಹಾಜರಿದ್ದ ಪೊಲೀಸರು ಕಿತ್ತುಕೊಂಡಿದ್ದಾರೆ.
ಅಂತ್ಯಕ್ರಿಯೆಯಾದ ನಂತರ ಮೊಬೈಲ್ ವಾಪಾಸು ಮಾಡಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಕೆಲವರು ಹೇಳಿದ್ದಾರೆ. ಇನ್ನು ಈ ಘಟನೆಯ ಬಗೆ ಬೀಡ್ ಜಿಲ್ಲಾಧಿಕಾರಿ ರವೀಂದ್ರ ಜಗ್ತಾಪ್ ಅವರು ಪ್ರತಿಕ್ರಿಯಿಸಿದ್ದು “ಈ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ತನಿಖೆ ನಡೆಸುವಂತೆ ಆದೇಶಿಸಿದ್ದೇನೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ನಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ”ಎಂದು ಹೇಳಿದ್ದಾರೆ.