ಬೆಂಗಳೂರು, ಏ.27 (DaijiworldNews/HR): "ಸರ್ಕಾರ ಚುನಾವಣೆ ನಡೆಸಿದ್ದರಿಂದ ನಾನು ಪ್ರಚಾರಕ್ಕೆ ಹೋಗಬೇಕಾಯ್ತು, ಇಲ್ಲವಾದರೆ ನಾನು ಯಾಕೆ ಹೋಗುತ್ತಿದ್ದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, "ಚುನಾವಣೆಗಳನ್ನು ಆಯೋಗ ಮುಂದೆ ಹಾಕಬೇಕಿತ್ತು, ಐದು ರಾಜ್ಯಗಳ ಚುನಾವಣೆಯ ಅಗತ್ಯ ಏನಿತ್ತು? ಪ್ರಧಾನಿ ಜನಸಾಗರ ನೋಡಿ ಖುಷಿ ಪಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ" ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಒಂದು ರ್ಯಾಲಿಯಲ್ಲಿ ಇಂತಹ ದೊಡ್ಡ ಜನಸಾಗರ ನಾನು ಎಲ್ಲೂ ನೋಡಿಲ್ಲ ಎಂದರು, ರೋಗ ತಡೆಗಟ್ಟುವುದಕ್ಕಿಂತ ರ್ಯಾಲಿ ಮಾಡುವುದು ಮುಖ್ಯವಾಗಿತ್ತು, ಮದ್ರಾಸ್ ಹೈಕೋರ್ಟ್ ಈಗ ಕೊರೊನಾಗೆ ಚುನಾವಣಾ ಆಯೋಗವೇ ಹೊಣೆಯೆಂದು ಹೇಳಿದೆ. ಆಯೋಗದ ಮೇಲೆ ಕೊಲೆ ಪ್ರಕರಣ ಯಾಕೆ ಹಾಕಬಾರದೆಂದು ಕೇಳಿದೆ" ಎಂದಿದ್ದಾರೆ.
"ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಡವಿದ್ದು, ಸರ್ಕಾರಕ್ಕೆ ತಜ್ಙರು ಸಲಹೆ ನೀಡುತ್ತಲೇ ಇರುತ್ತಾರೆ. ಮೊದಲ ಅಲೆ ಮುಗಿದ ಬಳಿಕ ಗಂಭೀರ ಕ್ರಮಗಳನ್ನು ಸರ್ಕಾರ ಕೈ ಬಿಟ್ಟಿದ್ದು, ಜನವರಿಯಲ್ಲಿ ಎರಡನೇ ಅಲೆ ಪ್ರಾರಂಭವಾಗಬಹುದೆಂದು ನವೆಂಬರ್ 2020 ರಲ್ಲಿ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಸರ್ಕಾರವು ವರದಿಯನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ" ಎಂದು ಹೇಳಿದ್ದಾರೆ.