ನವದೆಹಲಿ, ಏ 27 (DaijiworldNews/MS): ಕೊರೊನಾ ಸಾಂಕ್ರಮಿಕ ರೋಗವೂ ಜಗತ್ತಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು, ಹೀಗಾಗಿ ಇನ್ನು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವಿಮಾನಯಾನದ ವಿಚಾರದಲ್ಲಿ ಸಾಕಷ್ಟು ಹೊಸ ನಿಯಮಗಳು ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಹೊಸ ನಿಯಮಗಳ ಪೈಕಿ ಅತಿ ಹೆಚ್ಚು ಚರ್ಚೆಯಲ್ಲಿರುವುದು ವ್ಯಾಕ್ಸಿನ್ ಪಾಸ್ಪೋರ್ಟ್. ಇನ್ನು ಮುಂದೆ ಅನೇಕ ದೇಶಗಳಿಗೆ ಪ್ರಯಾಣಿಸುವಾಗ ನಿಮ್ಮ ಬಳಿ ವೀಸಾ , ಪಾಸ್ ಪೋರ್ಟ್ ಇದ್ದಂತೆ, ಲಸಿಕೆ ಪಾಸ್ಪೋರ್ಟ್ ಹೊಂದಿದ್ದೀರಾ ಎಂದು ಕೇಳಿದರೆ ಅಚ್ಚರಿಪಡಬೇಕಿಲ್ಲ.
ಏನಿದು ವ್ಯಾಕ್ಸಿನ್ ಪಾಸ್ಪೋರ್ಟ್ ?
ಕೇವಲ ಪಾಸ್ಪೋರ್ಟ್ ಮತ್ತು ವೀಸಾ ಮಾತ್ರ ಇದ್ದರೆ ಇನ್ನು ಮುಂದೆ ವೈಮಾನಿಕ ಪ್ರಯಾಣ ಕಷ್ಟವಾಗಬಹುದು. ನೀವು ಕೋವಿಡ್ ಲಸಿಕೆ ಪಡೆದಿದ್ದೀರಾ, ಯಾವಾಗ ಪಡೆದಿದ್ದೀರಾ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ. ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್ಗಳನ್ನು ಹೊಂದಿರುವ ಡಿಜಿಟಲ್ ರೆಕಾರ್ಡ್ ಇದಾಗಿರಬಹುದು. ಪ್ರಯಾಣವನ್ನು ಸರಾಗಗೊಳಿಸುವ ಮತ್ತು ಸಾಮಾನ್ಯ ಸ್ಥಿತಿಗೆ ಮರಳುವ ವೇಗದ ಮಾರ್ಗ ವ್ಯಾಕ್ಸಿನ್ ಪಾಸ್ಪೋರ್ಟ್ ಆಗಿದೆ . ಆದರೆ ಇದು ಭವಿಷ್ಯದಲ್ಲಿ ಅದು ಅನಿವಾರ್ಯವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಪಾಸ್ಪೋರ್ಟ್ಗಳು ಭವಿಷ್ಯದಲ್ಲಿ ಅನಿವಾರ್ಯವಾಗುತ್ತವೆ ಏಕೆಂದರೆ ಅವು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುತ್ತವೆ, ಆರ್ಥಿಕತೆಯನ್ನು ಪುನರಾರಂಭಿಸಲು ಸಹಾಯ ಮಾಡುತ್ತದೆ ಮತ್ತು ಜಾಗತಿಕವಾಗಿ ಪ್ರಯಾಣಕ್ಕೆ ಇರುವ ಅಡೆತಡೆಗಳನ್ನು ತೆಗೆದುಹಾಕುತ್ತವೆ. ಅಲ್ಲದೆ ಲಸಿಕೆ ಪಾಸ್ಪೋರ್ಟ್ಗಳು ಜನರು ತಮ್ಮನ್ನು ತಾವು ‘ಸುರಕ್ಷಿತ’ ಎಂದು ಸಾಬೀತುಪಡಿಸಲು ಸಹಾಯಕಾರಿಯಗಬಹುದು ಎಂದು ತಜ್ಞರು ಹೆಳಿದ್ದಾರೆ.
ಕೋವಿಡ್ ಮಿತಿಮೀರಿರುವ ಭಾರತದ ಪ್ರಯಾಣಿಕರನ್ನುಈಗಾಗಲೇ ಯುಕೆ, ಯುಎಇ, ಕೆನೆಡಾ, ಆಸ್ಟ್ರೇಲಿಯಾ, ಕುವೈಟ್ ಸೇರಿದಂತೆ ನಾನಾ ದೇಶಗಳು ನಿಷೇಧಿಸಿವೆ. ಇದಕ್ಕೆ ವ್ಯಾಕ್ಸಿನ್ ಪಾಸ್ಪೋರ್ಟ್ ಉತ್ತರವಾಗಲ್ಲದು ಎನ್ನುವ ನಿರೀಕ್ಷೆ ಇದೆ. ಅಲ್ಲದೆ ಪ್ರಯಾಣಿಸಬೇಕೆಂದಿರುವ ದೇಶದ ನಡುವಿನ ಹೊಂದಾಣಿಕೆ ಹೇಗಿದೆ ಎನ್ನುವುದೂ ನಮ್ಮ ಪ್ರಯಾಣವನ್ನು ನಿರ್ಧರಿಸುವಂಥಾ ಪರಿಸ್ಥಿತಿ ಬರಬಹುದು. ಇದೇನೂ ಸದ್ಯ ಕೊರೊನಾದಿಂದ ಇರುವ ತಾತ್ಕಾಲಿಕ ವ್ಯವಸ್ಥೆ ಎಂದುಕೊಳ್ಳುವಂತಿಲ್ಲ. ದೀರ್ಘಕಾಲದವರಗೆ ವೈಮಾನಿಕ ಪ್ರಯಾಣಿಕರು ಈ ಎಲ್ಲಾ ನಿಯಮಗಳ ಜೊತೆಗೆ ಪ್ರಯಾಣಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.