ಬೆಂಗಳೂರು, ಏ.27 (DaijiworldNews/MB) : ''ಕೊರೊನಾ ಲಾಕ್ಡೌನ್ ಸಂದರ್ಭ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸುತ್ತೇನೆ. ಈ ಸಂದರ್ಭ ನಾವು ಯಾರನ್ನೂ ಹಸಿವಿನಿಂದ ಇರಲು ಬಿಡಲಾರೆವು'' ಎಂದು ಸಚಿವ ಸೋಮಣ್ಣ ಹೇಳಿದರು.
ಹೆಬ್ಬಾಳ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾವು ಕೆಲವು ದಿನ ಪರಿಸ್ಥಿತಿ ಅವಲೋಕನ ಮಾಡುತ್ತೇವೆ. ನಾವು ಶಾಸಕರು ನಮ್ಮ ಕ್ಷೇತ್ರದಲ್ಲೇ ಕಷ್ಟದಲ್ಲಿರುವ ಜನರಿಗೆ ನೆರವು ನೀಡುತ್ತೇವೆ. ಪರಿಹಾರ ನೀಡುವಂತೆ ಸಿಎಂಗೂ ಆಗ್ರಹ ಮಾಡುತ್ತೇವೆ. ಈಗಾಗಲೇ ಡಿ ಕೆ ಶಿವಕುಮಾರ್ ಅವರು ಸರ್ಕಾರ ಪ್ಯಾಕೇಜ್ ಘೋಷಿಸಿಲ್ಲ ಎಂದು ಟೀಕಿಸಿ, ಘೋಷಣೆಗೆ ಆಗ್ರಹಿಸಿದ್ದಾರೆ. ಆರೋಪ, ಟೀಕೆ ಮಾಡುವುದು ವಿಪಕ್ಷವಾದ ಅವರಿಗೆ ಬಿಟ್ಟ ವಿಚಾರ. ನಾವು ನಮ್ಮ ಕರ್ತವ್ಯ ಏನಿದೆ ಅದನ್ನು ಮಾಡುತ್ತೇವೆ'' ಎಂದರು.
ಇನ್ನು ''ಜನರು ಗುಳೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜನರಲ್ಲಿ ಗಾಬರಿ, ಗೊಂದಲವಿರುವ ಹಿನ್ನೆಲೆ ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ವಾಪಾಸ್ ತೆರಳುತ್ತಿದ್ದಾರೆ. ಈ ಹಿನ್ನೆಲೆ ನಾವು ಏನು ಮಾಡುವುದು ಎಂದು ಕೂಡಾ ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ತಿಳಿಸಿದರು.
''ಖಾಸಗಿ ಆಸ್ಪತ್ರೆಗಳಲ್ಲಿ ಶೋಷಣೆ, ಹಣ ವಸೂಲಿ ನಮ್ಮ ಗಮನಕ್ಕೆ ಬಂದರೆ ಸರಿ ಮಾಡಬಹುದು. ಎಲ್ಲವನ್ನೂ ನಮ್ಮಿಂದ ಸರಿ ಮಾಡಲು ನಮ್ಮಿಂದ ಆಗದು. ನಾವು ಯಾರೂ ಕೂಡಾ ಎಲ್ಲವನ್ನೂ ಸರಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.