ಬೆಂಗಳೂರು, ಏ.27 (DaijiworldNews/HR): ಕರ್ನಾಟಕದಲ್ಲಿ ಇಂದು ರಾತ್ರಿಯಿಂದ ಜಾರಿಯಾಗಲಿರುವ ಅಘೋಷಿತ ಲಾಕ್ ಡೌನ್ ನಿಂದ ನಷ್ಟಕ್ಕೊಳಗಾಗುವ ಎಲ್ಲ ವರ್ಗದವರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಗಿ ಕ್ರಮದ ಹೆಸರಿನಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದು, ಕೊರೊನಾ ಮಾರ್ಗಸೂಚಿ ನಿಯಮಗಳಿಂದ ಯಾರಿಗೆ ತೊಂದರೆ ಆದರೂ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು, ಬಡ್ಡಿ ಮನ್ನಾ ಮಾಡಿ ಸಾಲ ಮರು ಪಾವತಿಗೆ ಗಡುವು ಮುಂದೂಡಬೇಕು" ಎಂದಿದ್ದಾರೆ.
"ಆಟೋ, ಟ್ಯಾಕ್ಸಿ, ಟ್ರಾನ್ಸ್ ಫೋರ್ಟ್ ಮುಂತಾದ ವಾಹನ ಚಾಲಕರಿಗೆ ರಕ್ಷಣೆ ನೀಡಬೇಕು, ಫೈನಾನ್ಷಿಯರ್ ಗಳು ಕೊಡುವ ಕಿರುಕುಳ ನಿಲ್ಲಿಸಬೇಕು" ಎಂದರು.
ಇನ್ನು ಅಗತ್ಯ ಸೇವೆಗಳಿಗೆ ಪಟ್ಟಿಗೆ ಹೋಟೆಲ್, ಸಾರಿಗೆ , ರೆಸ್ಟೋರೆಂಟ್ ಉದ್ಯಮಗಳನ್ನು ಸೇರಿಸಬೇಕು, ಇಲ್ಲದಿದ್ದಲ್ಲಿ ರೈತರು, ಕಾರ್ಮಿಕರು,ವರ್ತಕರ ಪರವಾಗಿ ನಿಂತು ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.