ನವದೆಹಲಿ, ಏ.27 (DaijiworldNews/MB) : ಕೊರೊನಾ ಸೋಂಕು ತೀವ್ರ ಪ್ರಮಾಣವನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ವಿಜಯೋತ್ಸವ ನಡೆಸುವುದಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.
ಕೊರೊನಾ ಸೋಂಕು ದೇಶದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಈಗಾಗಲೇ ಹಲವು ರಾಜ್ಯಗಳು ಲಾಕ್ಡೌನ್ ಹಾಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಏತನ್ಮಧ್ಯೆ ಚುನಾವಣಾ ಆಯೋಗವು ಮೇ2 ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ನಡೆಯುವ ಸಂಭ್ರಮಾಚರಣೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.
ಯಾವುದೇ ವಿಜಯೋತ್ಸವ ರ್ಯಾಲಿ, ಸಮಾವೇಶ ನಡೆಸುವಂತಿಲ್ಲ, ಹಾಗೆಯೇ ಅಧಿಕ ಜನರು ಸೇರುವಂತಿಲ್ಲ ಎಂದು ಆಯೋಗ ಆದೇಶ ಹೊರಡಿಸಿದೆ.
ಸೋಮವಾರವಷ್ಟೇ ಮದ್ರಾಸ್ ಹೈಕೋರ್ಟ್, ಕೊರೊನಾ ಹರಡುತ್ತಿರುವಾಗಲೂ ರಾಜಕೀಯ ರ್ಯಾಲಿಗಳನ್ನು ನಡೆಸಲು ಅವಕಾಶ ನೀಡಿದ್ದ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೊರೊನಾ ಹರಡಿ ಜನರ ಸಾವು ಉಂಟಾಗಲು ಚುನಾವಣಾ ಆಯೋಗವೇ ಕಾರಣ. ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ವಾಗ್ದಾಳಿ ನಡೆಸಿತ್ತು.