ಕಾರವಾರ, ಏ.27 (DaijiworldNews/MB) : ''ಕೊರೊನಾ ಲಾಕ್ಡೌನ್, ಕರ್ಫ್ಯೂ ಕಾರಣದಿಂದಾಗಿ ಗೋಕರ್ಣದಲ್ಲೇ ಸಿಲುಕಿರುವ ವಿದೇಶಿ ಪ್ರಜೆಗಳು ತಮಗೂ ಕೊರೊನಾ ಲಸಿಕೆ ನೀಡಿ'' ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
130 ವಿದೇಶಿ ಪ್ರಜೆಗಳು ಧಾರ್ಮಿಕ ಪ್ರದೇಶಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಗೋಕರ್ಣಕ್ಕೆ ಬಂದಿದ್ದಾರೆ. ಆದರೆ ಕೊರೊನಾ ಸೋಂಕು ಪ್ರಮಾಣ ಅಧಿಕವಾದ ಪರಿಣಾಮ ಇಲ್ಲೇ ತಂಗಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿದಿನ ಭೇಟಿ ನೀಡಿ ನಮಗೂ ಲಸಿಕೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿ ಭರತ್ ಕುಮಾರ್, ''ವಿದೇಶಿ ಪ್ರಜೆಗಳು ಪ್ರವಾಸಕ್ಕೆಂದು ಇಲ್ಲಿಗೆ ಬಂದಿದ್ದಾರೆ. ಆದರೆ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆ ಇಲ್ಲಿಯೇ ತಂಗಿದ್ದಾರೆ. ಈಗ ಜಿಲ್ಲಾ ಆಸ್ಪತ್ರೆಗೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಭೇಟಿ ನೀಡಿ ಎಲ್ಲಾ ಅಧಿಕಾರಿಗಳಲ್ಲೂ ತಮಗೆ ಕೊರೊನಾ ಲಸಿಕೆ ನೀಡಲು ಮನವಿ ಮಾಡಿಕೊಂಡಿದ್ದಾರೆ'' ಎಂದು ತಿಳಿಸಿದ್ದಾರೆ.
ಇನ್ನು ಈ ವಿಚಾರದಲ್ಲಿ ಅಧಿಕಾರಿಯೊಬ್ಬರು ಮಾತನಾಡಿ, ''ಹಲವು ವಿದೇಶಿ ಪ್ರಜೆಗಳು ಹಣ ಕೊಡುತ್ತೇವೆ ಲಸಿಕೆ ನೀಡಿ ಎಂದು ಆಸ್ಪತ್ರೆಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ. ಆದರೆ ನಮಗೆ ಸರ್ಕಾರದ ಯಾವುದೇ ಸೂಚನೆ ದೊರೆಯದೆ ನಾವು ವಿದೇಶಿ ಪ್ರಜೆಗಳಿಗೆ ಲಸಿಕೆ ನೀಡಲು ಸಾಧ್ಯವಿಲ್ಲ . ಸರ್ಕಾರ ಈಗಾಗಲೇ ರಾಯಭಾರಿ ಕಚೇರಿಗಳು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಲಸಿಕೆ ನೀಡಲು ಸೂಚಿಸಿದೆ. ಆದರೆ ಪ್ರವಾಸಕ್ಕೆಂದು ದೇಶಕ್ಕೆ ಬಂದು ಇಲ್ಲಿಗೆ ಸಿಲುಕಿದವರಿಗೆ ಲಸಿಕೆ ನೀಡಲು ಯಾವುದೇ ಸೂಚನೆ ನೀಡಿಲ್ಲ'' ಎಂದು ತಿಳಿಸಿದ್ದಾರೆ.
ಹಾಗೆಯೇ ''ಇಲ್ಲಿ ಸಿಲುಕಿದ ಕೆಲವು ವಿದೇಶಿ ಪ್ರಜೆಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ'' ಎಂದು ಕೂಡಾ ಅಧಿಕಾರಿ ಹೇಳಿದ್ದಾರೆ.