ನವದೆಹಲಿ, ಏ 27 (DaijiworldNews/MS): ಭಾರತದಲ್ಲಿ ಕೊರೊನಾವೈರಸ್ ಪ್ರಕರಣ ಹಾಗೂ ಸೋಂಕಿನಿಂದ ಉಂಟಾದ ಸಾವುಗಳಲ್ಲಿ ಸ್ವಲ್ಪ ಕುಸಿತ ಕಂಡಿದ್ದು, ಮಂಗಳವಾರ 3.23 ಲಕ್ಷ ಪ್ರಕರಣಗಳು ಮತ್ತು 2,771 ಸಾವಿನ ಪ್ರಕರಣಗಳು ದಾಖಲಾಗಿದೆ.
ದೇಶದಲ್ಲಿ ಮಂಗಳವಾರ 3,23,144 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,76,36,307ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2771 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,97,894ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 28,82,204ಕ್ಕೆ ಏರಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 2,51,827 ಕೋವಿಡ್ -19 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 1,45,56,209ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ ದಿನ 16,58,700 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 28,09,79,877 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಹೊಸ ಕೋವಿಡ್ -19 ಪ್ರಕರಣಗಳ ಪೈಕಿ ಐದು ರಾಜ್ಯಗಳ ಶೇ 47.67 ದಷ್ಟಿದ್ದು ಈ ಪೈಕಿ ಮಹಾರಾಷ್ಟ್ರದಲ್ಲಿ ಮಾತ್ರ ಹೊಸ ಪ್ರಕರಣಗಳಲ್ಲಿ ಶೇ 15.07 ರಷ್ಟು ಇದೆ. ಮಹಾರಾಷ್ಟ್ರದಲ್ಲಿ (524) ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ದೆಹಲಿಯಲ್ಲಿ 380 ದೈನಂದಿನ ಸಾವುಗಳು ಸಂಭವಿಸಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.