ನವದೆಹಲಿ, ಏ 27 (DaijiworldNews/MS): ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಬಿಕ್ಕಟ್ಟು ಹಿನ್ನಲೆಯಲ್ಲಿ ಆಮ್ಲಜನಕದ ದಾಸ್ತಾನು ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.
ಕೋವಿಡ್-19 ಬಿಕ್ಕಟ್ಟಿನ ನಡುವೆ ಆಮ್ಲಜನಕದ ಕೊರತೆಯ ಬಗ್ಗೆ ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದು, ದೆಹಲಿಗೆ ಆಮ್ಲಜನಕ ಒದಗಿಸಲು ಕೇರಳ ಸಿದ್ಧವಾಗಿದೆ ಎಂದು ಕೇರಳ ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಅವರು ಹೇಳಿದ್ದಾರೆ. ಆದರೆ ಕೇರಳವು ಆಮ್ಲಜನಕವನ್ನು ಒದಗಿಸಲು ಸಿದ್ಧವಿದ್ದರೂ, ಅದನ್ನು ದೆಹಲಿಗೆ ತಲುಪಿಸುವುದೇ ನಮ್ಮ ಮುಂದಿರುವದೊಡ್ಡ ಸವಾಲಾಗಿದೆ ಹೀಗಾಗಿ ದೆಹಲಿಯ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ದೇವ್ ಅವರೊಂದಿಗೆ ಸರ್ಚಿಸುವುದಾಗಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಮ್ಲಜನಕ ಒದಗಿಸುವಂತೆ ಪತ್ರ ಬರೆದು ವಿನಂತಿಸಿದ್ದು, ಈ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೆಹಲಿಗೆ ಆಮ್ಲಜನಕ ಒದಗಿಸುವ ಸಾಧ್ಯತೆಯ ಬಗ್ಗೆ ಗಮಹರಿಸುವಂತೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಕಾರ್ಯದರ್ಶಿ ಮಟ್ಟದ ಚರ್ಚೆಗಳು ಪ್ರಗತಿಯಲ್ಲಿವೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಬಿಕ್ಕಟ್ಟಿನ ಉಸ್ತುವಾರಿ ಹೊತ್ತಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ದೆಹಲಿಯ ಮಲಯಾಳಿ ಜನರ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾದ "ಜನ ಸಂಸ್ಕೃತ " ಸಂಘ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದು, ಆಮ್ಲಜನಕವನ್ನು ಒದಗಿಸಲು ಸಹಾಯವನ್ನು ಕೋರಿತ್ತು. ದೆಹಲಿ ಮಲಯಾಳಿಗಳಿಗೆ ಆರೋಗ್ಯ ಭದ್ರತೆ ನೀಡುವಂತೆ ಜನ ಸಂಸ್ಕೃತ ನಾಯಕರು ಕೇರಳ ಸಿಎಂಗೆ ಮನವಿ ಮಾಡಿದ್ದರು.
ಈ ಹಿಂದೆ ಕೋವಿಡ್ -19 ರೋಗಿಗಳಿಗೆ 20,000 ಲೀಟರ್ ದ್ರವ ಆಮ್ಲಜನಕವನ್ನು ಗೋವಾಕ್ಕೆ ಸಾಗಿಸಲು ಕೇರಳ ಸರ್ಕಾರ ಅನುಕೂಲ ಮಾಡಿಕೊಂಡಿತ್ತು."ಗೋವಾ ರಾಜ್ಯದಲ್ಲಿ ಕೊವೀಡ್ ರೋಗಿಗಳಿಗೆ 20,000 ಲೀಟರ್ ದ್ರವ ಆಮ್ಲಜನಕದ ಚಲನೆಗೆ ಸಹಾಯ ಮಾಡಿದ ಕೇರಳದ ಆರೋಗ್ಯ ಸಚಿವ ಶ್ರೀಮತಿ ಶೈಲಾಜಾ ಟೀಚರ್ ಮೇಡಮ್ ಅವರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನಮ್ಮ ಹೋರಾಟಕ್ಕೆ ನೀವು ನೀಡಿದ ಕೊಡುಗೆಗಾಗಿ ಗೋವಾದ ಜನರು ನಿಜವಾಗಿಯೂ ಕೃತಜ್ಞರಾಗಿರುತ್ತಾರೆಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಟ್ವೀಟ್ ಮಾಡಿ ಕೇರಳಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.