ಬೆಂಗಳೂರು, ಏ.26 (DaijiworldNews/MB) : ''ಕೊರೊನಾ ಸೋಂಕು ಪ್ರಕರಣದಲ್ಲಿ ದೇಶದಲ್ಲೇ ಬೆಂಗಳೂರು ನಗರ ಅಗ್ರ ಸ್ಥಾನದಲ್ಲಿದೆ. ಹೀಗಿರುವಾಗ ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಏನಾದರೂ ಒಂದು ಕ್ರಮ ಕೈಗೊಳ್ಳಬೇಕು. ಸರ್ಕಾರ ಆದಷ್ಟು ಬೇಗ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನಾಳೆ ಸಂಜೆಯಿಂದ ರಾಜ್ಯಾದ್ಯಾಂತ 14 ದಿನಗಳ ಕಾಲ ಭಾಗಶಃ ಲಾಕ್ ಡೌನ್ ಆಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭ ಎಲ್ಲಿಯೂ ಲಾಕ್ಡೌನ್ ಶಬ್ದ ಉಲ್ಲೇಖ ಮಾಡದೆ, ಬಿಗಿ ಕ್ರಮ ಎಂದಷ್ಟೇ ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ''ಸಿಎಂ ಬಿಎಸ್ವೈ ಲಾಕ್ಡೌನ್ ಎಂಬ ಪದವನ್ನು ಮಾತ್ರ ಬಳಸಿಲ್ಲ. ಆದರೆ ಪರಿಸ್ಥಿತಿ ಕೈ ಮೀರಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರ ಕೊರೊನಾ ಸಾವಿನ ಪ್ರಮಾಣ ಮುಚ್ಚಿಡುತ್ತಿದೆ. ಯಾವುದೇ ಅಂಕಿ ಅಂಶ ಸರಿಯಿಲ್ಲ'' ಎಂದು ಆರೋಪ ಮಾಡಿದ್ದಾರೆ.
''ಸರ್ಕಾರ ತೊಂದರೆಗೊಳಗಾದವರಿಗೆ ಪರಿಹಾರ ನೀಡಬೇಕು. ಕನಿಷ್ಠ ಪಕ್ಷ ಬ್ಯಾಂಕ್ಗಳ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು'' ಎಂದು ಒತ್ತಾಯಿಸಿದರು.