ನವದೆಹಲಿ, ಎ.26 (DaijiworldNews/PY): ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತಿಯಾಗಿ ಎರಡು ವರ್ಷ ಪೂರೈಸಿದ ವೈದ್ಯರನ್ನು ಕೊರೊನಾ ನಿಯಂತ್ರಣ ಕೆಲಸಕ್ಕೆ ಕರೆಸಿಕೊಳ್ಳುವುದಾಗಿ ಸರ್ಕಾರ ಸೋಮವಾರ ತಿಳಿಸಿದೆ.
ದೇಶದಲ್ಲಿ ಉಂಟಾಗಿರುವ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ನವದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಜನರಲ್ ಬಿಪಿನ್ ರಾವತ್ ಅವರು ಸಭೆ ನಡೆಸಿದ್ದಾರೆ. ಈ ಸಂದರ್ಭ ಬಿಪಿನ್ ರಾವತ್ ಅವರು ಕೊರೊನಾ ಬಗ್ಗೆ ತಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
"ಸೇನೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದು. ಸೇನೆಯಲ್ಲಿ ಕೊರೊನಾ ತಡೆ ನಿಯಮಾವಳಿಗಳನ್ನು ಬಳಸಲಾಗುತ್ತಿದೆ" ಎಂದು ಹೇಳಿದ್ದಾರೆ.
"ಸೇನಾ ಆಸ್ಪತ್ರೆಗಳಲ್ಲಿ, ನಾಗರಿಕರಿಗೆ ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಲಾಗುತ್ತಿದೆ. ಸೇನಾ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಪೂರಕವಾಗಿ ಶುಶ್ರೂಷಾ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಅವರು, ಭಾರತ ಹಾಗೂ ವಿದೇಶಗಳಲ್ಲಿ ಆಮ್ಲಜನಕ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಾಗಿಸಲು ಭಾರತೀಯ ವಾಯುಪಡೆಯು ಕೈಗೊಳ್ಳುತ್ತಿರುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು.