ಬಾಂಬೆ, ಏ.26 (DaijiworldNews/MB) : ವಾಟ್ಸ್ಆಪ್ ಗ್ರೂಪ್ನಲ್ಲಿ ಸದಸ್ಯರು ಹಾಕುವ ಪೋಸ್ಟ್ಗಳಿಗೆ ಆ ಗ್ರೂಪ್ನ ಅಡ್ಮೀನ್ಗಳು ಹೊಣೆಯಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನ ಪೀಠ ಮಹತ್ವದ ಆದೇಶ ನೀಡಿದೆ.
ಮಹಿಳೆಯೋರ್ವರು ತಾನು ಇದ್ದ ವಾಟ್ಸ್ಆಪ್ ಗ್ರೂಪ್ ಒಂದರಲ್ಲಿ ಗ್ರೂಪ್ ಸದಸ್ಯರೊಬ್ಬರು ಆಕ್ಷೇಪಾರ್ಹ ಪೋಸ್ಟ್ ಹಾಕಿದಾಗ ಅದರ ವಿರುದ್ದ ಗ್ರೂಪ್ನ ಅಡ್ಮೀನ್ ಆದ ಕಿಶೋರ್ ಟ್ಯಾರೋನ್ (33) ಎಂಬವರು ವಿರೋಧಿಸಿಲ್ಲ, ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಕ್ಷಮೆ ಕೇಳಲು ಹೇಳಿಲ್ಲ ಎಂದು ಆರೋಪಿಸಿ ಗ್ರೂಪ್ನ ಅಡ್ಮೀನ್ ವಿರುದ್ದ ಪ್ರಕರಣ ದಾಖಲು ಮಾಡಿದ್ದರು.
ಈ ಪ್ರಕರಣವನ್ನು ರದ್ದು ಮಾಡುವಂತೆ ಮಹಿಳೆಯಿದ್ದ ವಾಟ್ಸಾಪ್ ಗ್ರೂಪ್ನ ಅಡ್ಮೀನ್ ಆದ ಕಿಶೋರ್ ಟ್ಯಾರೋನ್ ಬಾಂಬೆ ಹೈಕೋರ್ಟ್ ಕದ ತಟ್ಟಿದ್ದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಝೆದ್ ಎ ಹಕ್ ಹಾಗೂ ಎಬಿ ಬೋರ್ಕಾರ್ ಅವರನ್ನು ಒಳಗೊಂಡ ಪೀಠ, ''ಸದಸ್ಯರು ಹಾಕುವ ಪೋಸ್ಟ್ಗಳಿಗೆ ವಾಟ್ಸ್ಆಪ್ ಗ್ರೂಪ್ನ ಅಡ್ಮೀನ್ಗಳು ಹೊಣೆಯಾಗಲಾರರು, ಅವರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಅವರಿಗೆ ಗುಂಪಿನ ಸದಸ್ಯರು ಹಾಕುವ ಪೋಸ್ಟ್ಗಳನ್ನು ಸೆನ್ಸಾರ್ ಮಾಡಲಾಗದು, ನಿಯಂತ್ರಿಸಲಾಗದು'' ಎಂದು ಹೇಳಿದೆ.
''ಆದರೆ ಗುಂಪಿನ ಯಾವುದೇ ಸದಸ್ಯ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ್ದರೆ, ಆ ವ್ಯಕ್ತಿಯ ವಿರುದ್ದ ಕ್ರಮಕೈಗೊಳ್ಳಬಹುದು'' ಎಂದು ಸ್ಪಷ್ಟಪಡಿಸಿದ್ದಾರೆ.