ಬೆಂಗಳೂರು, ಎ.26 (DaijiworldNews/PY): ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಪಿಎಂ ಕೇರ್ಸ್ ಎಂಬ ಖಾಸಗಿ ನಿಧಿ ಸ್ಥಾಪಿಸಿ ಸಂಗ್ರಹವಾದ ಹಣ ಬಳಸದೆ ಕುಳಿತರು, 2ನೇ ಅಲೆಯ ಬಗ್ಗೆ ಹಿಂದೆಯೇ ತಜ್ಞರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಿದವರು, ಈಗ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುತ್ತಾರಂತೆ" ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಪ್ರಧಾನಿ ನರೇಂದ್ರ ಮೋದಿ ಅವರೇ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವುದು" ಅಂದರೆ ಇದೇ!. ಪಿಎಂ ಕೇರ್ಸ್ ಎಂಬ ಖಾಸಗಿ ನಿಧಿ ಸ್ಥಾಪಿಸಿ ಸಂಗ್ರಹವಾದ ಹಣ ಬಳಸದೆ ಕುಳಿತರು. 2ನೇ ಅಲೆಯ ಬಗ್ಗೆ ಹಿಂದೆಯೇ ತಜ್ಞರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಿದವರು ಈಗ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುತ್ತಾರಂತೆ!. ಇವು ಕಾರ್ಯಾರಂಭವಾಗುವುದು 8ನೇ ಅಲೆಗೊ? 9ನೇ ಅಲೆಗೊ?! ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
"ಸರ್ಕಾರದ ಕೆಲವು ನಿರ್ಧಾರ ದ್ವಂದ್ವಗಳಿಂದ ಕೂಡಿದೆ. ವಾಹನ ಸಂಚಾರಗಳಿಗೆ ನಿಷೇಧವನ್ನೂ ಹೇರಿದೆ, ಜೊತೆಗೆ ಉತ್ಪಾದನಾ ವಲಯಕ್ಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧವಿಲ್ಲ ಎನ್ನುತ್ತದೆ. ಸಂಚಾರಕ್ಕೆ ಅವಕಾಶವಿಲ್ಲದೆ ಇದ್ಯಾವೂ ಕಾರ್ಯಚರಿಸುವುದಿಲ್ಲ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲವೇ ಅಥವಾ ಅಪವಾದ ತಪ್ಪಿಸಿಕೊಳ್ಳಲು ತಂತ್ರಗಾರಿಕೆಯೇ?" ಎಂದು ಕೇಳಿದೆ.
"ತಜ್ಞರ ಸಲಹೆಗಳನ್ನಲ್ಲದೆ ಸಂಸದೀಯ ಸಮಿತಿಯ ಸಲಹೆಯನ್ನೂ ನಿರ್ಲಕ್ಷಿಸಿ ಆಮ್ಲಜನಕ ದಾಸ್ತಾನಿನ ಬಗ್ಗೆ ಕೊಂಚವೂ ಯೋಚಿಸದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರೋನಾ ಸಂದರ್ಭದಲ್ಲಿ ಅತಿ ಹೆಚ್ಚು ಆಕ್ಸಿಜನ್ ವಿದೇಶಗಳಿಗೆ ರಫ್ತು ಮಾಡಿತ್ತು. ಬಿಜೆಪಿ ಕರೋನಾ ಗೆದ್ದೇಬಿಟ್ಟೆವು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರ ಪರಿಣಾಮವೇ ಇಂದಿನ ಸಾವು, ನೋವುಗಳು" ಎಂದು ಕಿಡಿಕಾರಿದೆ.
"ಇದು ಬಿಜೆಪಿ ಸರ್ಕಾರ ಕರೋನಾ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸದ ಬೇಜವಾಬ್ದಾರಿತನಕ್ಕೆ ಇದೊಂದು ಉದಾಹರಣೆ. ರಾಜ್ಯದಲ್ಲಿ ಬೆಡ್ಗಳಿಗಾಗಿ ಹಾಹಾಕಾರವೆದ್ದಿದ್ದರೂ ರೈಲ್ವೆ ಐಸೋಲೇಶನ್ ವಾರ್ಡ್ಗಳು ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ಬೇಡಿಕೆಯನ್ನೇ ಮುಂದಿಟ್ಟಿಲ್ಲ. ಸಚಿವ ಸುಧಾಕರ್ ಅವರೇ, ನೀವು ಒಂದು ಕ್ಷಣವೂ ಸಚಿವರಾಗಿರಲು ಅನರ್ಹರು" ಎಂದು ಆಕ್ರೋಶ ವ್ಯಕ್ತಪಡಿಸಿದೆ.