ಬೆಳಗಾವಿ, ಎ.26 (DaijiworldNews/PY): "ಕೊರೊನಾದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಕೋವಿಡ್ ಭೀಕರತೆ ಅನುಭವಿಸಿದ್ದೇನೆ. ಕೊರೊನಾದಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು" ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಅವರು, "ನಾವು ಕೊರೊನಾದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದೆವು. ಈ ಕಾರಣದಿಂದ ನಮ್ಮ ಕುಟುಂಬದ 18 ಜನರಿಗೆ ಸೋಂಕು ದೃಢಪಟ್ಟಿತ್ತು. ದೇವರ ದಯೆಯಿಂದ ನಾವೆಲ್ಲರೂ ಸೋಂಕಿನಿಂದ ಗುಣಮುಖರಾಗಿದ್ದೇವೆ" ಎಂದಿದ್ದಾರೆ.
"ಕೊರೊನಾ ವಾರಿಯರ್ಗಳು ನಮ್ಮ ಕಣ್ಣಿಗೆ ದೇವರಾಗಿ ಕಾಣಿಸುತ್ತಿದ್ದಾರೆ. ಕೊರೊನಾದ ಎರಡನೇ ಅಲೆ ಇಷ್ಟು ವೇಗವಾಗಿ ಹರಡುತ್ತಿರುವ ಕಾರಣ ನಮ್ಮ ನಿಯಂತ್ರಣಕ್ಕೆ ಸಿಗುತ್ತಿಲ್ಲ. ನಾವೆಲ್ಲರೂ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ" ಎಂದು ತಿಳಿಸಿದ್ದಾರೆ.
"ನಿಜವಾಗಿಯೂ ಕೊರೊನಾ ಒಂದು ಕೆಟ್ಟ ರೋಗ. ಇದನ್ನು ಅನುಭವಿಸಿದವರಿಗೆ ಇದರ ಬಗ್ಗೆ ಗೊತ್ತು. ಕೊರೊನಾದಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.