ಚೆನ್ನೈ, ಏ.26 (DaijiworldNews/MB) : ಕೊರೊನಾ ಹರಡುತ್ತಿರುವಾಗಲೂ ರಾಜಕೀಯ ರ್ಯಾಲಿಗಳನ್ನು ನಡೆಸಲು ಅವಕಾಶ ನೀಡಿದ್ದ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ಖಂಡಿಸಿದೆ.
ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಅವರು, ರ್ಯಾಲಿಯಲ್ಲಿ ನಿಯಮ ಪಾಲನೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವಲ್ಲಿ ಆಯೋಗ ವಿಫಲವಾಗಿದೆ ಎಂದು ಟೀಕಿಸಿರುವುದು ಮಾತ್ರವಲ್ಲದೇ ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ಪರ ವಕೀಲ ಕೊರೊನಾ ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದು, ಆ ಸಂದರ್ಭ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ರಾಜಕೀಯ ರ್ಯಾಲಿಗಳು ನಡೆಯುತ್ತಿದ್ದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಉಳಿವು ಮತ್ತು ರಕ್ಷಣೆಯಾಗಿದೆ ಎಂದು ಹೇಳಿದರುವ ಹೈಕೋರ್ಟ್ ರಾಜ್ಯ ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿ ಏಪ್ರಿಲ್ 30ರೊಳಗೆ ಎಣಿಕೆ ದಿನದಂದು ಪಾಲಿಸಬೇಕಾದ ಮಾರ್ಗಸೂಚಿಯನ್ನು ಜಾರಿಗೆ ಯೋಜನೆಯನ್ನು ನೀಡುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಈ ವರ್ಷ ಏಪ್ರಿಲ್ 6ರಂದು ಚುನಾವಣೆ ನಡೆದ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮವನ್ನು ಸರಿಯಾಗಿ ಜಾರಿಗೆ ತರದಿದ್ದರೆ, ಮೇ 2 ರಂದು ಎಣಿಕೆ ಕಾರ್ಯಕ್ರಮಕ್ಕೆ ತಡೆ ನೀಡುವುದಾಗಿ ಹೈಕೋರ್ಟ್ ಎಚ್ಚರಿಸಿದೆ.