ಕಾನ್ಪರ್, ಏ.26 (DaijiworldNews/HR): ತನ್ನ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದ ಮಗ ಆಕೆಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಆತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ರಸ್ತೆ ಬದಿಯಲ್ಲಿ ಮಲಗಿದ್ದ ಮಹಿಳೆಯನ್ನು ನೋಡಿದ ಸ್ಥಳೀಯ ನಿವಾಸಿಗಳು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ತನ್ನ ಮಗ ವಿಶಾಲ್ ಅವರೊಂದಿಗೆ ವಾಸಿಸುತ್ತಿದ್ದ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿದೊಂಡಿದ್ದು, ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ ತಾಯಿಯಿಂದ ವೈರಸ್ ಹರಡಬಹುದೆಂಬ ಭಯದಿಂದ ವಿಶಾಲ್ ತನ್ನ ತಾಯಿಯನ್ನು ತನ್ನ ಸಹೋದರಿಯ ಮನೆಯ ಹೊರಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನು ಮಹಿಳೆಯ ಮಗಳು ಕೂಡ ಅನಾರೋಗ್ಯ ಪೀಡಿತ ತಾಯಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ಬಳಿಕ ಕೆಲವು ಸ್ಥಳೀಯ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆ ಬದಿಯಲ್ಲಿ ಮಲಗಿದ್ದ ಮಹಿಳೆಯನ್ನು ನೋಡಿ, ಕೆಲವು ಸ್ಥಳೀಯ ನಿವಾಸಿಗಳು ಇಡೀ ಘಟನೆಯ ವಿಡಿಯೋವನ್ನು ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ.