ನವದೆಹಲಿ, ಎ.26 (DaijiworldNews/PY): "ದೇಶದ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಾಕಷ್ಟು ಚರ್ಚೆ ಆಗಿದೆ. ದೇಶದ ಜನಕತೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಬೇಕು. ದೇಶವನ್ನು ಬಿಜೆಪಿ ವ್ಯವಸ್ಥೆಗೆ ಬಲಿಪಶುವನ್ನಾಗಿಸಬೇಡಿ" ಎಂದಿದ್ದಾರೆ.
ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿರುವ ಕೋವ್ಯಾಕ್ಸಿನ್ಗೆ ಸಂಸ್ಥೆ ಬೆಲೆ ನಿಗದಿ ಮಾಡಿದೆ. ಒಂದು ಡೋಸ್ಗೆ 600 ರೂ., ಖಾಸಗಿ ಆಸ್ಪತ್ರೆಗೆ 1,200 ರೂ. ದರದಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ 2,800 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,92,311 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,69.60,172ಕ್ಕೆ ಏರಿಕೆ ಕಂಡಿದೆ.ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 1,40,85,110 ಮಂದಿ ಗುಣಮುಖರಾಗಿದ್ದಾರೆ. ಸದ್ಯ 26,82,751 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,02,367 ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಈ ಮುಖೇನ ದೇಶದಲ್ಲಿ ಒಟ್ಟು 27,93,21,177 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ದೇಶದಲ್ಲಿ ಇಲ್ಲಿಯವರಗೆ 14,19,11,223 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.