ಬೆಂಗಳೂರು, ಏ 26(DaijiworldNews/MS): ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಆದೇಶವನ್ನು ಸ್ವಲ್ಪ ಮಟ್ಟಿಗೆ ಪರಿಷ್ಕೃರಿಸಿದೆ. ಹೀಗಾಗಿ ಪರಿಷ್ಕೃತ ಆದೇಶದ ಪ್ರಕಾರ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರ ಬದಲು ಕೇವಲ ಇನ್ನು ಮುಂದೆ ಐದು ಜನರು ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದೆ.
ರಾಜ್ಯವನ್ನು ಅಬ್ಬರಿಸುತ್ತಿರುವ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಏ.21ರಿಂದ ನೈಟ್ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಆದೇಶ ಮಾಡಿತ್ತು. ಹೀಗಾಗಿ ಈ ಆದೇಶದಲ್ಲಿ ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೂ ಹೆಚ್ಚು ಜನ ಗುಂಪು ಸೇರುವುದು ತಪ್ಪುತ್ತಿರಲಿಲ್ಲ.
ಈಗ ಅದನ್ನು ಮಾರ್ಪಡಿಸಿ ಕೇವಲ ಐದು ಜನರಿಗೆ ಮಿತಿಗೊಳಿಸಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರ ಇಲಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.