ಮೈಸೂರು, ಏ.26 (DaijiworldNews/HR): ಭಾರತದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ, ವೆಂಟಿಲೇಟರ್ ಖಾಲಿ ಇಲ್ಲ, ಐಸಿಯು ಹಾಸಿಗೆಗಳು ಖಾಲಿ ಇಲ್ಲ ಎಂಬ ಬೋರ್ಡ್ ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ನೇತು ಹಾಕಲಾಗಿದ್ದು ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.
ಇತ್ತೀಚೆಗಷ್ಟೆ ದೆಹಲಿಯ ಶಾಂತಿ ಮುಕಂದ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಾಗದೇ, ದಾಖಲಾತಿ ಸ್ಥಗಿತಗೊಳಿಸಬೇಕಾಗಿದೆ ಎಂದು ಆಸ್ಪತ್ರೆಯ ಮುಂದೆ ಬೋರ್ಡ್ ತಗುಲು ಹಾಕಿದ್ದು, ಇದೀಗ ಇಂತಹ ಬೋರ್ಡ್ಗಳು ಕರ್ನಾಟಕದಲ್ಲಿಯೂ ಬೀಳಲು ಪ್ರಾರಂಭವಾಗಿದೆ.
ನಗರದ ಕೆ ಆರ್ ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಬೆಡ್ ಪುಲ್ ಆಗಿದ್ದು, ಇದರಿಂದಾಗಿ ಕೊರೊನಾ ಸೋಂಕಿತರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ಜಿಲ್ಲಾಸ್ಪತ್ರೆ ಹಾಗೂ ಕೆ ಆರ್ ಆಸ್ಪತ್ರೆಗಳು ಸೇರಿದಂತೆ ನಗರ ಸರ್ಕಾರಿ ಆಸ್ಪತ್ರೆಗಳಲ್ಲಿ 405 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 70 ವೆಂಟಿಲೇಟರ್ ಗಳುಳ್ಳ ಹಾಸಿಗೆಗಳು ಪುಲ್ ಆಗಿವೆಯಂತೆ. ಜಿಲ್ಲಾಸ್ಪತ್ರೆ, ಕೆ ಆರ್ ಆಸ್ಪತ್ರೆ ಹಾಗೂ ಟ್ರಾಮ್ ಸೆಂಟರ್ ಸೇರಿ 54 ಐಸಿಯು ಬೆಡ್ ಗಳು ಕೂಡ ಪೂರ್ತಿಯಾಗಿದೆ. ಹೀಗಾಗಿಆಸ್ಪತ್ರೆಯ ಮುಂದೆ ವೆಂಟಿಲೇಟರ್ ಖಾಲಿ ಇಲ್ಲ. ಐಸಿಯು ಹಾಸಿಗೆಗಳು ಖಾಲಿ ಇಲ್ಲ ಎಂಬುದಾಗಿ ಬೋರ್ಡ್ ಹಾಕಲಾಗಿದೆ.