ನವದೆಹಲಿ, ಏ.26 (DaijiworldNews/MB) : ಗಣರಾಜ್ಯೋತ್ಸವದಂದು ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇದಕ್ಕೆ ಕುಮ್ಮಕ್ಕು ನೀಡಿದವರು ದೀಪ್ ಸಿಧು ಎಂದು ಆರೋಪಿಸಿ ಅವರ ವಿರುದ್ದ ಪ್ರಕರಣ ದಾಖಲು ಮಾಡಿ ಬಂಧಿಸಲಾಗಿತ್ತು. ಸೋಮವಾರ ನ್ಯಾಯಾಲಯವು ಜಾಮೀನು ನೀಡಿದೆ.
"ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ದೀಪ್ ಸಿಧುವಿಗೆ ಇನ್ನಷ್ಟು ದಿನ ಸೆರೆವಾಸ ನೀಡುವುದು ಯಾವುದೇ ಫಲವನ್ನು ನೀಡುವುದಿಲ್ಲ. ಅದು ನ್ಯಾಯಸಮ್ಮತವಾಗುವುದೂ ಇಲ್ಲ" ಎಂದು ಹೇಳಿದ್ದಾರೆ.
"ಆರೋಪಿಯನ್ನು ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿ ವಿಚಾರಣೆ ನಡೆಸಲಾಗಿದೆ. ಸುಮಾರು ಈ ಹಿಂದೆ ಜಾಮೀನು ಲಭಿಸಿದಾಗ 70 ದಿನಗಳ ಕಾಲ ಬಂಧನದಲ್ಲಿರಿಸಲಾಗಿದೆ. ಇದೇ ರೀತಿಯಲ್ಲಿ ಬಂಧನದಲ್ಲಿರಿಸುವುದು ಅವರ ಸ್ವಾತಂತ್ರ್ಯದ ನಿಲುವಿನಲ್ಲಿ ಕಾನೂನುಬದ್ಧವಾಗಿರುವುದಿಲ್ಲ ಎಂದು ಹೇಳಿದೆ.
ಫೆಬ್ರವರಿ 9 ರಂದು ದೀಪ್ ಸಿಧು ಅವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಏಪ್ರಿಲ್ 16 ರಂದು ಜಾಮೀನು ನೀಡಿದೆ. ಆದರೆ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ, ದೆಹಲಿ ಪೊಲೀಸರು ಮತ್ತೆ ನಟ ದೀಪ್ ಸಿಧು ಅವರನ್ನು ಬಂಧಿಸಿದ್ದರು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ದಾಖಲಿಸಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ನಟ ದೀಪ್ ಸಿಧು ಬಂಧನವಾಗಿತ್ತು.