ನವದೆಹಲಿ, ಏ.26 (DaijiworldNews/MB) : ಕೇಂದ್ರ ಸರ್ಕಾರವು ಕೊರೊನಾ ಲಸಿಕೆ ವಿತರಣೆ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕಾಂಗ್ರೆಸ್-ಮಿತ್ರಪಕ್ಷಗಳ ಆಡಳಿತ ಇರುವ ನಾಲ್ಕು ರಾಜ್ಯಗಳು ಆರೋಪ ಮಾಡಿದೆ.
ವರ್ಚುವಲ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಛತ್ತೀಸ್ಘಡ, ರಾಜಸ್ಥಾನ, ಪಂಜಾಬ್ ಹಾಗೂ ಜಾರ್ಖಂಡ್ (ಕಾಂಗ್ರೆಸ್-ಜೆಎಂಎಂ ಮೈತ್ರಿ)ನ ಆರೋಗ್ಯ ಸಚಿವರು, ''ಉತ್ಪಾದಕರಿಂದ ಲಸಿಕೆಯ ದಾಸ್ತಾನನ್ನು ಕೇಂದ್ರ ಸರಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ'' ಎಂದು ದೂರಿದ್ದು, 18ರಿಂದ 45 ನಡುವಿನ ಪ್ರಾಯದವರಿಗೆ ಮೇ 1ರಿಂದ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.
''ಮೇ 1ರ ಮುಂದಿನ ಹಂತದ ಲಸಿಕೆ ನೀಡಿಕೆ ಪ್ರಕ್ರಿಯೆಗೆ ನಾವು ಸಿದ್ಧರಾಗಿದ್ದೆವು. ಆದರೆ ಲಸಿಕೆ ಡೋಸ್ ಅನ್ನು ಒದಗಿಸಲು ಸಾಧ್ಯವಿಲ್ಲ ಎಂದು ಉತ್ಪಾದಕರು ತಿಳಿಸಿದ್ದಾರೆ. ನಮ್ಮ ರಾಜ್ಯ ಸರ್ಕಾರಕ್ಕೆ ಲಸಿಕೆ ದೊರೆಯದಿದ್ದರೆ, ನಾವು ಲಸಿಕೆಯನ್ನು ನೀಡುವುದಾದರೂ ಹೇಗೆ'' ಎಂದು ಛತ್ತೀಸ್ಘಡ, ರಾಜಸ್ಥಾನ, ಪಂಜಾಬ್ ಹಾಗೂ ಜಾರ್ಖಂಡ್ನ ಆರೋಗ್ಯ ಸಚಿವರುಗಳು ಪ್ರಶ್ನಿಸಿದ್ದಾರೆ. ''ಕೇಂದ್ರ ಸರ್ಕಾರ ಕೂಡಲೇ ಲಸಿಕೆ ಹಾಗೂ ಜೀವರಕ್ಷಕ ಔಷಧಗಳನ್ನು ಪೂರೈಕೆ ಮಾಡಬೇಕು'' ಎಂದು ಪಂಜಾಬ್ ಸಚಿವ ಬಲ್ಬೀರ್ ಸಿಂಗ್ ಸಿಧು ಆಗ್ರಹಿಸಿದ್ದಾರೆ.
ರಾಜಸ್ಥಾನದ ಆರೋಗ ಸಚಿವ ರಘು ಶರ್ಮಾ ಮಾತನಾಡಿ, ''ಸೀರಮ್ ಇನ್ಸ್ಟಿಟ್ಯೂಟ್ ಮೇ 15ರ ವರೆಗೆ ಲಸಿಕೆ ಪೂರೈಸಲು ಸಾಧ್ಯವಾಗದು ಎಂದು ಹೇಳಿದೆ. ಹಾಗಿರುವಾಗ ನಾವು 18ರಿಂದ 45 ವರ್ಷದ ನಡುವಿನ ನಾಗರಿಕರಿಗೆ ಲಸಿಕೆ ನೀಡುವುದು ಹೇಗೆ? ಲಸಿಕೆ ದೊರೆಯದಿದ್ದರೆ, ಲಸಿಕೆ ನೀಡುವುದು ಸಾಧ್ಯವಾಗದು. ಲಸಿಕೆ ಪೂರೈಕೆ ಮಾಡಿದರೆ, ನಾವು ಲಸಿಕೆ ಹಾಕಲು ಸಿದ್ದರಿದ್ದೇವೆ'' ಎಂದು ತಿಳಿಸಿದ್ದಾರೆ.