ಬೆಂಗಳೂರು, ಏ.26 (DaijiworldNews/HR): ಕೊರೊನಾ ಪ್ರಕರಣ ದೇಶದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಭಾರತದಲ್ಲಿ ಈಗ ಕೊರೊನಾ 2ನೇ ಅಲೆ ಮಾತ್ರ ಇದೆ. ಇದು ಇನ್ನೂ 30-40 ದಿನಗಳ ವರೆಗೆ ಇರುತ್ತದೆ. ಆದರೆ ಬೇರೆ ದೇಶಗಳಲ್ಲಿ 3 ಮತ್ತು 4ನೇ ಅಲೆ ಕೂಡ ಆರಂಭವಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ದೃಢಪಟ್ತ ತಕ್ಷಣ ಭಯಪಡುವ ಅಗತ್ಯವಿಲ್ಲ. ಇದೊಂದು ಸಾಮಾನ್ಯ ಜ್ವರ, ನೆಗಡಿಯಂತಹ ವೈರಸ್. ಪಾಸಿಟಿವ್ ಎಂದಾಕ್ಷಣ ಭಯಗೊಂಡು ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿಲ್ಲ. ಅನಗತ್ಯವಾಗಿ ಆಸ್ಪತ್ರೆಗೆ ಬರುವುದರಿಂದ ಅಗತ್ಯವಿರುವ ಸೋಂಕಿತರಿಗೂ ಬೆಡ್, ಆಕ್ಸಿಜನ್ ಸಿಗದೆ ಸಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ" ಎಂದರು.
ಇನ್ನು ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯುಂಟಾಗುತ್ತಿದ್ದು, ಇದನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು. ಸೋಂಕಿನ ಲಕ್ಷಣ ಕಂಡು ಬಂದಾಕ್ಷಣ ಆಸ್ಪತ್ರೆಗೆ ಬರಬೇಡಿ. ಮನೆಯಲ್ಲಿಯೇ ಐಸೋಲೇಟ್ ಆಗಿ, ಟೆಲಿಕಾಲಿಂಗ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಅವರಿಂದ ಔಷಧ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ ಎಂದು ತಿಳಿಸಿದ್ದಾರೆ.