ನವದೆಹಲಿ, ಏ.26 (DaijiworldNews/MB) : ''ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಮೇ 1 ರಿಂದ ನಡೆಯಲಿದ್ದು ಈ ಅಭಿಯಾನದ ಬಗ್ಗೆ ಕೆಲವು ಪ್ರತಿಪಕ್ಷ ನಾಯಕರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ'' ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆರೋಪಿಸಿದ್ದಾರೆ.
''ಕೊರೊನಾ ರೋಗವು ಸುನಾಮಿಯಂತೆ ಹರಡುತ್ತಿದೆ. ಈ ಸಂದರ್ಭದಲ್ಲಿ ನಿಯಂತ್ರಣವನ್ನು ಕ್ಷಿಪ್ರವಾಗಿ ಸರಾಗವಾಗಿ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವು ಕೊರೊನಾ ಲಸಿಕೆ ನೀಡಿಕೆಗೆ ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ವಲಯಕ್ಕೆ ಮುಕ್ತ ಅವಕಾಶ ನೀಡಲೇಬೇಕಾಯಿತು'' ಎಂದು ಸ್ಪಷ್ಟೀಕರಣ ನೀಡಿದರು.
ಇನ್ನು ''ಯಾವುದೇ ಯುದ್ದವಾದರೂ ಸಮಯ ಬಹುಮುಖ್ಯ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಮಾರ್ಗದರ್ಶನದಲ್ಲಿ ಲಸಿಕಾ ನಿಯಮ ಸರಾಗಗೊಳಿಸಲು ನಾವು ತೀರ್ಮಾನಿಸಿದ್ದೇವೆ'' ಎಂದು ಹೇಳಿದರು.
''ಇಂತಹ ಸಂಕಷ್ಟದ ಸಂದರ್ಭದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಪ್ರಯತ್ನ ಮಾಡಲಾಗುತ್ತಿದೆ. ಇದು ದುರದೃಷ್ಟಕರ ವಿಚಾರ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನಗಳನ್ನು ಪತ್ತೆಹಚ್ಚಲು ನಾನು ಬಯಸುತ್ತೇನೆ'' ಎಂದರು.
ಇನ್ನು ''ಈವರೆಗೂ 14 ಕೋಟಿ ಲಸಿಕೆ ಪ್ರಮಾಣವನ್ನು ರಾಜ್ಯಗಳು ಜನರಿಗೆ ನೀಡಿವೆ. ಇನ್ನೂ ಕೆಲವು ಕೋಟಿ ಲಸಿಕೆಗಳನ್ನು ಸಂಗ್ರಹವಿದೆ. ಈವರೆಗೆ ಎಲ್ಲಾ ಡೋಸ್ಗಳನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಲಾಗಿದೆ. ಮೂರನೇ ಹಂತದಲ್ಲೂ ಈ ಮೊದಲಿನಂತೆಯೇ, ಶೇ 50 ಕೋಟಾದಿಂದ ಸರ್ಕಾರ ಉಚಿತ ಲಸಿಕೆಯನ್ನೇ ನೀಡಲಿದೆ. ಬಾಕಿ ಶೇ 50ರಷ್ಟು ಕೋಟಾವನ್ನು ತಾವೇ ಲಸಿಕೆ ನೀಡುವ ಪ್ರಕ್ರಿಯೆ ತೆರೆಯಲು ಈ ಹಿಂದೆಯೇ ಕೇಳಿಕೊಂಡಿದ್ದ ಹಿನ್ನೆಲೆ ರಾಜ್ಯಗಳಿಗೆ ನೀಡಲಾಗುವುದು. ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯ'' ಎಂದು ಹೇಳಿದರು.