ಬೆಂಗಳೂರು, ಏ. 25 (DaijiworldNews/SM): ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಈ ಹಿಂದೆ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಅವೆಲ್ಲವನ್ನೂ ಬಡವರ ವಿರೋಧಿ ಸರ್ಕಾರ ನಿಲ್ಲಿಸಲು ಹೊರಟಿದೆ. ಅವುಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ತಿಂಗಳಿಗೆ ಐದು ಕಿಲೋ ಅಕ್ಕಿ ಬದಲಿಗೆ ಎರಡು ಕಿಲೋ ಅಕ್ಕಿ ನೀಡುತ್ತಿದೆ. ರಾಜ್ಯದ ಮುಖ್ಯಮಂತ್ರಿಯವರು ಈ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ಹಾಗೂ ಬಡವರ ಶಾಪಕ್ಕೆ ಈಡಾಗಬಾರದು ಎಂದಿದ್ದಾರೆ.
ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕೆಂದು ಪ್ರಾರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೊನಾ ಕಷ್ಟ ಕೊನೆಯಾಗುವ ವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.