ಬೆಂಗಳೂರು, ಏ. 25 (DaijiworldNews/SM): ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಿಸಲು ಸರಕಾರ ಹಲವು ರೀತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಸೋಮವಾರದಿಂದ ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸೋಮವಾರದಿಂದ ಮುಂದಿನ ಒಂದು ತಿಂಗಳ ಕಾಲ ಬಹುತೇಕ ಎಲ್ಲಾ ಚಟುವಟಿಕೆಗಳ ಮೇಲೆ ನಿಯಂತ್ರಣ ತರಬೇಕೆನ್ನುವುದು ಕೆಲವರ ಅಭಿಪ್ರಾಯವಾಗಿದೆ. ಮತ್ತೊಂದೆಡೆ ಮುಂದಿನ ೧೫ ದಿನಗಳ ಕಾಲವಾದರೂ ನಿಯಂತ್ರಣ ಬೇಕೆನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಅತೀ ಹೆಚ್ಚು ಪ್ರಕರಣಗಳಿರುವ ಬೆಂಗಳೂರಿಗೆ ಬೀಗ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ರಾಜ್ಯಾದ್ಯಂತ ಕಠಿಣ ನಿಯಮ ಜಾರಿಗೊಳಿಸುವ ಚರ್ಚೆಗಳು ಕೂಡ ನಡೆದಿದೆ.
ಈ ಎಲ್ಲಾ ವಿಚಾರಗಳಿಂದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೋಮವಾರದಂದು ಸಚಿವ ಸಂಪುಟ ಸಭೆ ಕರೆದಿದ್ದು, ಅದರಲ್ಲಿ ನಿಯಂತ್ರಣ ಕ್ರಮಗಳ ಬಗ್ಗೆ ಹಾಗೂ ಸದ್ಯ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಂಪುಟ ಸದಸ್ಯರ ಸಲಹೆಗಳನ್ನು ಆಲಿಸಿ ತಜ್ಞರ ಸೂಚನೆಗಳನ್ನು ಗಮನಿಸಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.