ಗೋಪೇಶ್ವರ, ಏ.25 (DaijiworldNews/HR): ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಚೀನಾ ಗಡಿ ಸಮೀಪ ಸಂಭವಿಸಿದ ಹಿಮಪಾತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
10 ಮೃತದೇಹಗಳನ್ನು ಶನಿವಾರದ ವೇಳೆಗೆ ಪತ್ತೆ ಮಾಡಲಾಗಿದ್ದು, ರವಿವಾರ ಮತ್ತೊಂದು ಶವ ಸಿಕ್ಕಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ಕಚೇರಿ ಮಾಹಿತಿ ನೀಡಿದೆ.
ಇನ್ನು ಚಮೋಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಾತಿ ಎಸ್.ಭಧೌರಿಯಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಯಶವಂತ್ ಸಿಂಗ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಿಮಪಾತ ಸಂಭವಿಸಿದಾಗ 430 ಬಾರ್ಡರ್ ರೋಡ್ ಆರ್ಗನೈಜೇಶನ್ (ಬಿಆರ್ಒ) ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು ಎಂದು ಉತ್ತರಾಖಂಡದ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ.