ನವದೆಹಲಿ, ಏ.25 (DaijiworldNews/MB) : ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ವೈದ್ಯಕೀಯ ಉಪಕರಣ, ಆಕ್ಸಿಜನ್ ಸರಬರಾಜು, ಲಸಿಕೆ ಆಮದಿನ ಮೇಲಿನ ಸೀಮಾ ಸುಂಕ ಕಡಿತಗೊಳಿಸುವಂತೆ ನಿನ್ನೆಯಷ್ಟೇ ಕೇಂದ್ರ ಸರ್ಕಾರ ಆದೇಶಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಭಾನುವಾರ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಬಂದರು ಸಚಿವಾಲಯ, ದೇಶದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಆಮ್ಲಜನಕ ಮತ್ತು ಆಮ್ಲಜನಕ ಸಂಬಂಧಿತ ಸಲಕರಣೆಗಳ ಸರಕು ಸಾಗಿಸುವ ಹಡಗುಗಳ ಶುಲ್ಕ ರದ್ದು ಮಾಡಲಾಗಿದೆ. ಶುಲ್ಕ ರದ್ದು ಮಾಡುವ ಮೂಲಕ ದೇಶದಲ್ಲಿ ಆಕ್ಸಿಜನ್ ಪೂರೈಕೆಗೆ ಯಾವುದೇ ಅಡಚಣೆಯಾಗದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಗಳು ದಿನದಿಂದ ದಿನಕ್ಕೇ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ ದೇಶದ ಹೆಚ್ಚಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಆರಂಭಿಸಿದೆ.