ಬೆಂಗಳೂರು, ಎ.25 (DaijiworldNews/PY): "ಈವರೆಗೆ ಕರ್ಫ್ಯೂ ವಿಸ್ತರಣೆಯ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಸದ್ಯ ವೀಕೆಂಡ್ ಕರ್ಫ್ಯೂ ಮಾತ್ರವೇ ಮುಂದುವರೆಯಲಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರವಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಾರದ ದಿನಗಳಿಗೂ ಕರ್ಫ್ಯೂ ವಿಸ್ತರಣೆ ಮಾಡುವ ಬಗೆಗಿನ ವದಂತಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕರ್ಫ್ಯೂ ವಿಸ್ತರಣೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದಿದ್ದಾರೆ.
"ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು, ಜನರು ಉತ್ತಮವಾಗಿ ಸಹಕರಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ. ಶನಿವಾರ ಸಂಜೆ ಸಿಎಂ ಅವರೊಂದಿಗೆ ನಡೆದ ಸಭೆಯಲ್ಲಿ ಈ ವಿಚಾರದ ಬ್ಗಗೆ ಚರ್ಚೆ ನಡೆದಿಲ್ಲ" ಎಂದು ಹೇಳಿದ್ದಾರೆ.
"ನಾವು ಮನವಿ ಮಾಡಿರುವುದಕ್ಕಿಂತಲೂ ಕೇಂದ್ರ ಸರ್ಕಾರ ಹೆಚ್ಚಿನ ಅಂದರೆ 800 ಟನ್ ಆಮ್ಲಜನಕವನ್ನು ಪೂರೈಕೆ ಮಾಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಆಮ್ಲಜನಕದ ಮೇಲಿನ ಹೊರೆಯನ್ನು ಇಳಿಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಆಮ್ಲಜನಕ ದೊರಕಲಿದೆ" ಎಂದು ತಿಳಿಸಿದ್ದಾರೆ.
"ರಾಜ್ಯ ಸರ್ಕಾರದ ಬಳಿ ಎಪ್ರಿಲ್ ರ ತನಕ ಸುಮಾರು 50,000 ರೆಮ್ಡಿಸಿವರ್ ಔಷಧಿಯ ಸಂಗ್ರಹ ಇತ್ತು. ಕೇಂದ್ರವು ಸುಮಾರು 1.22 ಲಕ್ಷ ರೆಮ್ಡಿಸಿವರ್ ಔಷಧ ಪೂರೈಕೆ ಮಾಡುವ ಭರವಸೆ ನೀಡಿದ್ದು, ನಾನು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.
"ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಮೊದಲ ಡೋಸ್ ನೀಡಲಾಗುವುದು. ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲಾಗುತ್ತಿದೆ. ಲಸಿಕೆಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ" ಎಂದು ಹೇಳಿದ್ದಾರೆ.