ನವದೆಹಲಿ, ಏ.25 (DaijiworldNews/MB) : ಭಾರತವು ಸತತ ನಾಲ್ಕನೇ ದಿನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ನಡುವೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ರಾಜ್ಯದ ಎಲ್ಲಾ ನಾಗರಿಕರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿದ್ದು ಪ್ರತಿದಿನ 60,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ.
ಲಸಿಕೆ ವಿಚಾರವಾಗಿ ರಾಜ್ಯ ಸಚಿವ ಸಂಪುಟದೊಂದಿಗೆ ಚರ್ಚಿಸಲಾಗಿದ್ದು ಇದಕ್ಕಾಗಿ ಜಾಗತಿಕ ಟೆಂಡರ್ಗಳನ್ನು ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದೆ ಕೊರೊನಾ ಮೂರನೇ ಅಲೆ ಬರಲಿದೆ ಎಂದು ಮಹಾರಾಷ್ಟ್ರ ಸಂಪುಟ ಸಚಿವ ಆದಿತ್ಯ ಠಾಕ್ರೆ ಹೇಳಿದ್ದರು. ಆದರೆ ಅದು ತೀವ್ರವಾಗಿರುವುದೇ ದುರ್ಬಲವಾಗಿರುವುದೇ ತಿಳಿಯದು ಎಂದೂ ಹೇಳಿದ್ದರು. ಹಾಗೆಯೇ ಲಸಿಕೆ ತಕ್ಷಣ ಪರಿಹಾರವಲ್ಲದಿದ್ದರೂ ಭವಿಷ್ಯಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ.
ಮಹಾರಾಷ್ಟ್ರ ಹೊರತಾಗಿ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗೋವಾ, ಕೇರಳ, ಛತ್ತೀಸ್ಗಢ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಹರಿಯಾಣ ಎಲ್ಲಾ ವಯಸ್ಕರಿಗೆ ಉಚಿತ ಕೊರೊನಾ ಲಸಿಕೆ ನೀಡುವ ಭರವಸೆ ನೀಡಿದೆ.